ಧಾರವಾಡ:
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಉಪನಿರ್ದೇಶಕರ ಕಾರ್ಯಾಲಯವು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಶಾಲಾ ಬ್ಯಾಂಡ್ ವಾದ್ಯ ನುಡಿಸುವ ಸ್ಪರ್ಧೆ ತಾಲೂಕಿನ ದಡ್ಡಿಕಮಲಾಪೂರ ಗ್ರಾಮದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಆವರಣ ಹಾಗೂ ಮುಗದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು.
ವಿಭಾಗದ ಏಳು ಜಿಲ್ಲೆಗಳ 11 ತಂಡಗಳಿಂದ ಸುಮಾರು 450 ವಿದ್ಯಾರ್ಥಿಗಳು ಪಾಲ್ಗೊಂಡು ಪೈಪ್ ಬ್ಯಾಂಡ್ ಹಾಗೂ ಬ್ರಾಸ್ ಬ್ಯಾಂಡ್ ವಿಭಾಗಗಳಲ್ಲಿ ಅದ್ಭುತ ವಾದ್ಯ ಕೌಶಲ್ಯವನ್ನು ಪ್ರದರ್ಶಿಸಿದರು. ಪ್ರತಿಯೊಂದು ತಂಡದ ಪ್ರದರ್ಶನದಲ್ಲೂ ಶಿಸ್ತು, ಸಮನ್ವಯ, ಏಕಾಗ್ರತೆ ಹಾಗೂ ಸಾಮೂಹಿಕ ಪ್ರಯತ್ನದ ಸೊಬಗು ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಗಳ ವಾದ್ಯಗಳ ನಿನಾದ ಕೇವಲ ಸಂಗೀತದ ಸಂಭ್ರಮವಾಗಿರದೆ, ಅವರ ಪರಿಶ್ರಮ ಮತ್ತು ಪ್ರತಿಭೆಯ ಅಭಿವ್ಯಕ್ತಿಯಾಗಿ ಮೂಡಿಬಂದಿತು.ಬಾಲಕಿಯರ ಪೈಪ್ ಬ್ಯಾಂಡ್ ವಿಭಾಗದಲ್ಲಿ ಬೆಳಗಾವಿಯ ಕೇಂದ್ರೀಯ ವಿದ್ಯಾಲಯ ಪ್ರಥಮ ಸ್ಥಾನ ಪಡೆದು ಗಮನ ಸೆಳೆಯಿತು. ಬಾಲಕಿಯರ ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಕೇಂದ್ರೀಯ ವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಬೆಳಗಾವಿ ಕ್ಯಾಂಪ್‌ನ ಸೇಂಟ್ ಪಾಲ್ಸ್ ಹೈಸ್ಕೂಲ್ ಪ್ರಥಮ ಸ್ಥಾನ ಗಳಿಸಿದರೆ, ಬೆಳಗಾವಿಯ ಭರತೇಶ್ ಸೆಂಟ್ರಲ್ ಸ್ಕೂಲ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಭಜಂತ್ರಿ ಬಹುಮಾನ ವಿತರಿಸಿದರು. ಸಹ ನಿರ್ದೇಶಕಿ ಜಯಶ್ರೀ ಕಾರೆಕಾರ, ಉಪನಿರ್ದೇಶಕರಾದ ಗಿರೀಶ್ ಪದಕಿ, ಉಮೇಶ ಬೊಮ್ಮಕ್ಕನವರ, ಎಸ್.ಎಂ. ಹುಡೇದಮನಿ, ವಿಜಯಲಕ್ಷ್ಮಿ ಹಂಚಿನಾಳ, ವಿಷಯ ಪರಿವೀಕ್ಷಕರಾದ ರೇಣುಕಾ ಇಂಗಳಕಿ, ರೇಖಾ ದೈವಜ್ಞ, ಗಿರಿಜಾ ಲಮಾಣಿ, ಪ್ರದೀಪ್ ರಾಠೋಡ, ಈಶ್ವರ ಆಯಟ್ಟಿ, ದೈಹಿಕ ಶಿಕ್ಷಕರು ಮತ್ತಿತರರು ಇದ್ದರು. ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಡಾ. ರೇಣುಕಾ ಅಮಲಜರಿ ನೋಡಲ್ ಅಧಿಕಾರಿಯಾಗಿದ್ದರು.