ಕನ್ನಡಪ್ರಭ ವಾರ್ತೆ ಬೆಂಗಳೂರು
ಡೆಂಘೀ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಜುಲೈನಲ್ಲಿ ಫೋರಂ ಸೌತ್ ಮಾಲ್, ಮಂತ್ರಿ ಮಾಲ್, ಮಾಲ್ ಆಫ್ ಏಷ್ಯಾ ಸಹಯೋಗದೊಂದಿಗೆ ಸ್ಪರ್ಧೆ ನಡೆಸಲಾಗಿತ್ತು. 250ಕ್ಕೂ ಹೆಚ್ಚು ವಾರಿಯರ್ಸ್ ಭಾಗವಹಿಸಿ ಡೆಂಘೀ ಮೂಲ ಗುರುತಿಸುವುದು, ವರದಿ ಮತ್ತು ತಡೆಗಟ್ಟುವ ಕುರಿತು ವಿಡಿಯೋಗಳನ್ನು ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.
ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಆಗಿರುವ ವಿಡಿಯೋಗಳ ಅನುಸಾರ ಪ್ರಶಸ್ತಿ ವಿತರಿಸಲಾಯಿತು. ಪ್ರಶಸ್ತಿಗೆ ಆಯ್ಕೆಯಾಗಿರುವ 10 ಮಂದಿಯ ಪೈಕಿ ಮೊದಲ 5 ವಿಜೇತರಿಗೆ ತಲಾ ₹25 ಸಾವಿರ ಮೌಲ್ಯದ ಗಿಫ್ಟ್ ಓಚರ್, ನಂತರದ 5 ಮಂದಿಗೆ ತಲಾ ₹10 ಸಾವಿರ ಮೌಲ್ಯದ ಗಿಫ್ಟ್ ಓಚರ್‌ನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಜತೆಗೆ ಶಾಲಾ ಮಟ್ಟದಲ್ಲಿ ಹೆಚ್ಚು ಮಕ್ಕಳಿಗೆ ಪ್ರೇರಣೆ ನೀಡಿದ ತರಗತಿ ಶಿಕ್ಷಕಿಗೆ ₹35 ಸಾವಿರ ಮೌಲ್ಯದ ಗಿಫ್ಟ್ ಓಚರ್ ಹಾಗೂ ಅತಿ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗೆ ₹1 ಲಕ್ಷ ಮೌಲ್ಯದ ಗಿಫ್ಟ್ ಓಚರ್ ನೀಡಲಾಯಿತು. ಈ ಗಿಫ್ಟ್ ಓಚರ್‌ಗಳನ್ನು ಸಹಭಾಗಿತ್ವ ವಹಿಸಿಕೊಂಡ ಸಂಸ್ಥೆಗಳಿಂದ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿಗಳು ಇದ್ದರು.