ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಬಜೆಗುಂಡಿ ಗ್ರಾಮದ ಖಿಳಾರಿಯ ಶಾಫಿ ಜುಮಾ ಮಸೀದಿ ಆಡಳಿತ ಮಂಡಳಿ, ಹಯಾತುಲ್ ಇಸ್ಲಾಂ ಅರೇಬಿಕ್ ಮದರಸ ಆಶ್ರಯದಲ್ಲಿ ಪ್ರವಾದಿ ಜನ್ಮದಿನದ ಕಾರ್ಯಕ್ರಮ ಮಸೀದಿ ಆವರಣದಲ್ಲಿ ನಡೆಯಿತು.ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡು ಮಾತನಾಡಿ, ಎಲ್ಲರೂ ಸಾಮರಸ್ಯದಿಂದ ಬದುಕುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವುದರೊಂದಿಗೆ, ಊರಿನ ಅಭಿವೃದ್ಧಿಗೂ ಸಹಕರಿಸಬೇಕಿದೆ ಎಂದರು.
ಮನೆ ಮತ್ತು ಸಮಾಜ ಬದಲಾವಣೆ ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಪಡೆದಲ್ಲಿ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಬದುಕನ್ನು ಕಾಣಬಹುದು. ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಬಿಟ್ಟು ಸಿಕ್ಕ ಅವಕಾಶ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.ಮಸೀದಿ ಧರ್ಮಗುರು ಉಬೈದ್ ಫೈಝಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಶಾಂತಿಯುತ, ಸೌಹಾರ್ದ ಬದುಕು ಕಂಡವರು. ಅವರ ಆದರ್ಶ ಇಂದಿಗೂ ಕಾಣಬಹುದು. ಇವರು ಅನಾಥರು, ಅಬಲೆಯರು ಹಾಗೂ ಹಿರಿಯರಿಗೆ ಗೌರವ ನೀಡುವುದು ಮತ್ತು ಧಾರ್ಮಿಕ ಹಾಗೂ ಲೌಖಿಕ ಶಿಕ್ಷಣ ನೀಡಿದಲ್ಲಿ ಮಾತ್ರ ಯುವ ಜನರು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಯುವಜನರು ತಮ್ಮ ಜೀವನದಲ್ಲಿಲ ಅಳವಡಿಸಕೊಳ್ಳುವ ಮೂಲಕ ಬದುಕು ಕಾಣಬೇಕೆಂದರು.
ಮಸೀದಿ ಅಧ್ಯಕ್ಷ ಕೆ.ಎ. ಯಾಕೂಬ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಗುರು ಸಮೀರ್ ಫೈಝಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಅನೀಫ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಸುಲೈಮನ್, ಕಾರ್ಯದರ್ಶಿ ನಿಯಾಜ್, ಗೌರವಾಧ್ಯಕ್ಷ ಅಬ್ದುಲ್, ಪದಾಧಿಕಾರಿಗಳಾದ ಮುಸ್ತಫ, ಮುನೀರ್, ಇಬ್ರಾಹಿಂ, ಅಬ್ದುಲ್ ರೆಹಮನ್ ಇದ್ದರು.ಶಾಸಕ ಡಾ. ಮಂತರ್ ಗೌಡ ಹಾಗೂ ಸೋಮವಾರಪೇಟೆ ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಮ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಸಮುದಾಯದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಮಕ್ಕಳಿಗೆ ಧಫ್, ಭಾಷಣ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.