ಹಾನಗಲ್ಲದಲ್ಲಿ ಹೆಚ್ಚುತ್ತಿರುವ ಡೆಂಘೀ, ಸ್ವಚ್ಛತೆ ಕಾರ್ಯಕ್ಕೆ ಚುರುಕು

KannadaprabhaNewsNetwork |  
Published : May 30, 2024, 12:53 AM IST
ಫೋಟೋ: ೨೯ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಡೆಂಘೀ ಭೀತಿ ಹೆಚ್ಚಾಗಿದ್ದು, ತಹಸೀಲ್ದಾರ್‌ ಎಸ್. ರೇಣುಕಮ್ಮ ಗ್ರಾಪಂಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

ಹಾನಗಲ್ಲ: ಡೆಂಘೀ ಭೀತಿಯ ನಡುವೆ ತಾಲೂಕಿನಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ವೇಗದ ಚಾಲನೆ ದೊರೆತಿದೆ. ತಹಸೀಲ್ದಾರ್‌ ಎಸ್. ರೇಣುಕಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಹಾನಗಲ್ಲ ತಾಲೂಕಿನ ಶ್ಯಾಡಗುಪ್ಪಿ, ಸಾವಿಕೇರಿ, ಕಾಲ್ವೆಯಲ್ಲಾಪುರ ಕೆಲವರಕೊಪ್ಪ ಗ್ರಾಮಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿವೆ. ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಚರಂಡಿ ಸ್ವಚ್ಛತೆ, ಕುಡಿಯುವ ನೀರು ಸಂಗ್ರಹ, ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿದ ತಹಸೀಲ್ದಾರರು ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಿಗೂ ತಿಳಿವಳಿಕೆ ಹೇಳಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು, ಸ್ವಚ್ಛತೆಗೆ ಗಮನ ಕೊಡಲು ಸೂಚಿಸಿದರು. ಸಾಂವಸಗಿ, ಕಾಡಶೆಟ್ಟಿಹಳ್ಳಿ, ಇನಾಂ ಯಲ್ಲಾಪುರ, ಸರ್ಕಾರಿ ದ್ಯಾಮನಕೊಪ್ಪ, ಹನುಮಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗಟಾರ ಸ್ವಚ್ಛತೆ, ಕುರುಚಲು ಗಿಡಗಳನ್ನು ತೆರವುಗೊಳಿಸುವುದು, ಜಲಾಗಾರಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬುಧವಾರ ತಾಲೂಕಿನ ಅಕ್ಕಿಆಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಯ ಸಭೆ ನಡೆಸಲಾಗಿದೆ. ಡೆಂಘೀ ತಡೆಗಟ್ಟುವಲ್ಲಿ ಹಾಗೂ ಸಕಾಲಿಕವಾಗಿ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ಕ್ರಮ ಕೈಗೊಳ್ಳಲು ಜಿಲ್ಲಾ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ, ಡಾ. ಚನ್ನಬಸಯ್ಯ ವಿರಕ್ತಮಠ, ಡಾ. ನೀಲೇಶ ಹಾಗೂ ತಾಲೂಕಿನ ಆರೋಗ್ಯ ಸಿಬ್ಬಂದಿ ಈ ಸಂದರ್ಭದಲ್ಲಿದ್ದರು.

ಲಾರ್ವಾ ಸರ್ವೆ ಅತ್ಯಂತ ಮುಖ್ಯ ಹಾಗೂ ಪ್ರಾಥಮಿಕ ಕೆಲಸವಾಗಿದ್ದು, ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಆರೋಗ್ಯ ಸಿಬ್ಬಂದಿಗೆ ಎಚ್ಚರಿಸಲಾಗಿದೆ. ಈಗ ಡೆಂಘೀ ಪ್ರಕರಣದ ೬೯ ಜನ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ, ಹಾವೇರಿ ಜಿಲ್ಲಾ ಆಸ್ಪತ್ರೆ, ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಮೂರು ದಿನಗಳಿಂದ ಡೆಂಘೀ ಪ್ರಕರಣಗಳು ನಿಯಂತ್ರಣದಲ್ಲಿದ್ದು, ಹೆಚ್ಚಿಗೆಯಾಗಿಲ್ಲ ಎಂದು ವೈದ್ಯಾಧಿಕಾರಿಗಳು ವರದಿ ನೀಡಿದ್ದಾರೆ.

ಡೆಂಘಿ ನಿಯಂತ್ರಣಕ್ಕೆ ಸಂಬಂಧಿಸಿದ ಪಿಡಿಒ, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ತಾಲೂಕು ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲೆಡೆ ಸ್ವಚ್ಛತಾ ಕಾರ್ಯ ನಡೆದಿದೆ. ಗ್ರಾಮಗಳಿಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ಇದರಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಂತ ಮುಖ್ಯ ಎಂದು ತಹಸೀಲ್ದಾರ್‌ ಎಸ್. ರೇಣುಕಮ್ಮ ಹೇಳಿದರು.

ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ಪ್ರಥಮ ಚಿಕಿತ್ಸೆಗಾಗಿ ಸಜ್ಜಾಗಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಔಷಧ ಹಾಗೂ ಇತರ ಚಿಕಿತ್ಸೆಗೆ ಆರೋಗ್ಯ ಇಲಾಖೆ ಸಿದ್ಧವಿದೆ. ಒಂದೆರಡು ದಿನಗಳಿಂದ ಡೆಂಘೀ ಪ್ರಕರಗಳು ಹೆಚ್ಚಾಗಿಲ್ಲ. ಆದಾಗ್ಯೂ ನಿರಂತರ ಆರೋಗ್ಯ ಸಿಬ್ಬಂದಿಯ ಸಂಪರ್ಕದಲ್ಲಿದ್ದು, ಜಾಗರೂಕರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ