ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿಗಳು, ಪಾಲಕರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಬಿಟಿಡಿಎ ಆವರಣದಲ್ಲಿರುವ ಆರ್.ಎಂ.ಎಸ್.ಎ ಪ್ರೌಢಶಾಲೆಯಲ್ಲಿ ನಡೆದಿದೆ.ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಶಾಲೆಯ 8 ಜನ ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಹಾಲ್ ಟಿಕೆಟ್ ನೀಡಲು ನಿರಾಕರಿಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. ಬಿಸಿಯೂಟ ಹಾಜರಿಯಲ್ಲಿ ಮಕ್ಕಳ ಹಾಜರಾತಿ ಇದೆ. ಮುಖ್ಯ ಶಿಕ್ಷಕಿ ಜಿ.ಎಸ್. ಖೋತ ಸುಳ್ಳು ಹೇಳುತ್ತಿದ್ದಾರೆ. ಮಕ್ಕಳು ಫೇಲ್ ಆದರೆ ಸಮಸ್ಯೆಯಾಗುತ್ತದೆ ಎಂದು ಹೇಳುತ್ತಿದ್ದಾರೆ.ಮಕ್ಕಳು ಅಧ್ಯಯನದಲ್ಲಿ ಸ್ವಲ್ಪ ಹಿಂದಿರಬಹುದು. ಹಾಗಂತ ಹಾಲ್‌ಟಿಕೆಟ್ ನಿರಾಕರಣೆಯಿಂದ ಮಕ್ಕಳ ಭವಿಷ್ಯಕ್ಕೆ ಕುತ್ತು ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಪಾಲಕರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯ ಶಿಕ್ಷಕಿ ಜಿ.ಎಸ್.ಖೋತ್ ಅವರು, 8 ಜನ ವಿದ್ಯಾರ್ಥಿಗಳ ಹಾಜರಾತಿ ಬಹಳ ಕಡಿಮೆ ಇದೆ. ಈ ಬಗ್ಗೆ ಮೇಲಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ.ಆನ್‌ಲೈನ್ ಪ್ರಕ್ರಿಯೆಯಲ್ಲಿ ಹಾಲ್ ಟಿಕೆಟ್‌ಗೆ ಅವರು ಅರ್ಹರಾಗಿಲ್ಲ. ಎರಡನೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು. ಉದ್ದೇಶಪೂರ್ವಕವಾಗಿ ಹಾಜರಾತಿ ಕಡಿಮೆ ತೋರಿಸಿಲ್ಲ. ಅದು ಸುಳ್ಳು ಆರೋಪ ಎಂದು ತಿಳಿಸಿದ್ದಾರೆ.ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳು, ಪಾಲಕರನ್ನು ಸಮಾಧಾನಪಡಿಸಿದರು. ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಅವಕಾಶ ದೊರೆಯಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಶೇ.75 ಹಾಜರಾತಿ ಇರಬೇಕು. ಈ ಮಕ್ಕಳ ಹಾಜರಾತಿ ಕಡಿಮೆ ಇದೆ. ಈ ಹಿನ್ನೆಲೆ ಹಾಲ್ ಟಿಕೆಟ್ ಸಿಕ್ಕಿಲ್ಲ. ಪರೀಕ್ಷೆಗೆ ಹಾಲ್ ಟಿಕೆಟ್ ಕೊಡಲು ಸಾಧ್ಯವಿಲ್ಲ. ಹಾಜರಾತಿ ಬಗ್ಗೆ ಪೋಷಕರಿಗೆ ನೀಡಿದ ಮಾಹಿತಿ ಬಗ್ಗೆ ಮಾಹಿತಿ ಕಲೆ ಹಾಕಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.