ಸ್ತುತ ಅಳವಿನಂಚಿನಲ್ಲಿರುವ ಜೀವ ವೈವಿಧ್ಯತೆಯನ್ನು ಲೆಕ್ಕ ಹಾಕುವುದೇ ಕಷ್ಟವಾಗುವಂತೆ ವಾತಾವರಣವನ್ನು ಮನುಷ್ಯ ತನ್ನ ಸ್ವಾರ್ಥದಿಂದ ದೂರು ಮಾಡುತ್ತಿದ್ದಾನೆ
ಕನ್ನಡಪ್ರಭ ವಾರ್ತೆ ಮೈಸೂರು
ಮನುಷ್ಯನ ಅತಿಯಾಸೆಯಿಂದ ಜೀವ ವೈವಿಧ್ಯತೆ ಅಳಿವಿನ ಅಂಚಿನಲ್ಲಿದೆ ಎಂದು ಪಂಜಾಬ್ ಮೊಹಾಲಿಯ ಅಮಿಟಿ ವಿವಿ ಕುಲಪತಿ ಹಾಗೂ ಪರಿಸರ ತಜ್ಞ ಪ್ರೊ. ರವೀಂದ್ರ ಕೆ. ಕೊಹ್ಲಿ ತಿಳಿಸಿದರು.ಮೈಸೂರು ವಿವಿ ಆಂತರಿಕ ಗುಣಮಟ್ಟ ಖಾತರಿ ಘಟಕವು ಪರಿಸರ ವಿಜ್ಞಾನ ಅಧ್ಯಯನ ವಿಭಾಗ, ಸಮಾಜ ಕಾರ್ಯ ಅಧ್ಯಯನ ವಿಭಾಗ, ಸಮಾಗಮಾ ವೆಲ್ ಫೇರ್ ಫೌಂಡೇಷನ್‌ಸಂಯುಕ್ತವಾಗಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನಾಚರಣೆಯನ್ನು ಉದ್ಘಾಟಿಸಿ ಅವರು, ಜೀವ ವೈವಿಧ್ಯತೆ ಸಂರಕ್ಷಣೆ- ಏಕೆ ಹಾಗೂ ಹೇಗೆ? ಕುರಿತು ಮಾತನಾಡಿದರು.ಪ್ರಸ್ತುತ ಅಳವಿನಂಚಿನಲ್ಲಿರುವ ಜೀವ ವೈವಿಧ್ಯತೆಯನ್ನು ಲೆಕ್ಕ ಹಾಕುವುದೇ ಕಷ್ಟವಾಗುವಂತೆ ವಾತಾವರಣವನ್ನು ಮನುಷ್ಯ ತನ್ನ ಸ್ವಾರ್ಥದಿಂದ ದೂರು ಮಾಡುತ್ತಿದ್ದಾನೆ. ಮನುಷ್ಯನ ದುರಾಸೆಯಿಂದ ಪರಿಸರದ ಜೀವ ವೈವಿಧ್ಯತೆ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದ್ದು, ಇದು ಹೀಗೆ ಮುಂದುವರಿದರೆ ಮನುಷ್ಯನೇ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ನೈಸರ್ಗಿಕವಾಗಿ ನಮಗೆ ಏನೆಲ್ಲ ಸಿಗುತ್ತಿದ್ದರೂ, ಸಿಕ್ಕಿದಷ್ಟಕ್ಕೆ ಖುಷಿಪಟ್ಟು ಪರಿಸರ ಉಳಿಸಬೇಕಾದ ನಾವುಗಳು, ಪ್ರಕೃತಿಯ ಮೇಲೆ ದೌರ್ಜನ್ಯ ಮಾಡಿ, ಜೀವ ವೈವಿಧ್ಯತೆಯನ್ನು ಅಳವಿನಂಚಿಗೆ ದೂಡುತ್ತಿದ್ದೇವೆ. ಜೀವವೈವಿಧ್ಯತೆ ಎಂದರೇನು? ಜೀವ ವೈವಿಧ್ಯತೆಯ ನಾಶಕ್ಕೆ ಕಾರಣಗಳು? ಸಮಾಜದ ಕರ್ತವ್ಯವೇನು ಎಂಬುದನ್ನು ನಾವು ಅರ್ಥ ಮಾಡಿಕೊಂಡು, ಪರಿಸರದಲ್ಲಿ ಸಮತೋಲನವನ್ನು ಕಾಪಾಡಬೇಕು ಎಂದರು.ಒಂದು ಮರ ಅಸಂಖ್ಯಾತ ಜೀವರಾಶಿಗಳಿಗೆ ಆಶ್ರಯ ನೀಡುತ್ತದೆ. ನಾನಾ ಬಗೆಯ ಪ್ರಾಣಿ, ಪಕ್ಷಿ ಮತ್ತು ಸಸ್ಯ ವರ್ಗದ ಪರಿಸರ ವ್ಯವಸ್ಥೆಯ ಸ್ಥಿರತೆ ಮತ್ತು ಪರಿಸರ ಸಮತೋಲನವನ್ನು ಕಾಪಾಡಲು ಜೀವವೈವಿಧ್ಯತೆ ಬಹಳ ಮುಖ್ಯವಾಗಿದೆ. ರೋಗಿಗಳಿಗೆ ಔಷಧ ತಯಾರಿಕೆಗೂ ಸಂಪನ್ಮೂಲವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ ಮಾತನಾಡಿ, ಪ್ರಸ್ತುತ ಗಾಳಿ, ನೀರು ಎಲ್ಲವೂ ಕಲುಷಿತವಾಗುತ್ತಿವೆ. ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದನ್ನು ತಪ್ಪಿಸಬೇಕಾದರೆ ಪರಿಸರದಲ್ಲಿ ಸಮತೋಲನ ಕಾಪಾಡಬೇಕು. ಪರಿಸರಕ್ಕೆ ನಾವು ಕೆಟ್ಟ ಪರಿಣಾಮ ಬೀರುವಂತೆ ಮಾಡಿದರೆ, ನಮಗೆ ಪರಿಸರ ಕೂಡ ಅಪಾಯ ತರುತ್ತದೆ. ಪರಿಸರ ಸಂರಕ್ಷಣೆಯಲ್ಲಿ ಜೀವ ವೈವಿಧ್ಯತೆ ಎಷ್ಟು ಮುಖ್ಯವಾಗಿದೆ ಎಂಬುವುದನ್ನು ನಾವೆಲ್ಲ ಅರಿಯಬೇಕಿದೆ ಎಂದು ತಿಳಿಸಿದರು.ಇದೇ ವೇಳೆ ಜೀವವೈವಿಧ್ಯತೆ ಮತ್ತು ಜೀವೋತ್ಪನ್ನಗಳ ಅನ್ವೇಷಣೆ ಕುರಿತು ಸಸ್ಯಶಾಸ್ತ್ರಜ್ಞ ಪ್ರೊ.ಆರ್. ರಾಘವೇಂದ್ರ ರಾವ್ ಉಪನ್ಯಾಸ ನೀಡಿದರು.ಗ್ಲೋಬಲ್ ಗ್ರೀನ್ ಫೌಂಡೇಶನ್ ಅಧ್ಯಕ್ಷ ಮಾಧವ್ ಉಲ್ಲಾಳ್, ಮೈಸೂರು ವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಎನ್.ಎಸ್. ರಾಜು, ಸಮಾಜಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಎಚ್.ಪಿ. ಜ್ಯೋತಿ, ಸಮಾಗಮಾ ವೆಲ್ ಫೇರ್ ಫೌಂಡೇಶನ್ ಅಧ್ಯಕ್ಷ ಶೀರ್ ಬಿಲ್ಲೇನಹಳ್ಳಿ ಪಾಂಡು, ಐಕ್ಯೂಎಸಿ ನಿರ್ದೇಶಕ ಪ್ರೊ.ಕೆ.ಎನ್. ಅಮೃತೇಶ್, ಸಂಯೋಜಕ ಡಾ.ಜೆ. ಲೋಹಿತ್ ಮೊದಲಾದವರು ಇದ್ದರು.----ಕೋಟ್...ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪ್ರಾಣಿಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲಿರುವ ಪ್ರಾಣಿಪಕ್ಷಿಗಳು ತಮ್ಮ ಆವಾಸ ಸ್ಥಾನವನ್ನು ಬದಲಾಯಿಸುತ್ತಿದ್ದಿಯೋ ಅಥವಾ ಮನುಷ್ಯನ ಸಹವಾಸದಿಂದ ದೂರ ಸರಿಯುತ್ತಿದ್ದೇಯೋ ತಿಳಿಯದಾಗಿದೆ. ಹೀಗಾಗಿ, ಚಾಮುಂಡಿಬೆಟ್ಟದಲ್ಲಿ ಜೀವ ಸಂಕುಲಗಳ ರಕ್ಷಣೆ ಆಗಬೇಕಿದೆ.- ಪ್ರೊ. ರವೀಂದ್ರ ಕೆ. ಕೊಹ್ಲಿ, ಅಂತಾರಾಷ್ಟ್ರೀಯ ಪರಿಸರತಜ್ಞ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.