ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಸರ್ಕಾರದ ಮಾರ್ಗಸೂಚಿ ಪ್ರಕಾರ ತಾಲೂಕು ಕಚೇರಿಯಲ್ಲಿ ಜೂನ್ ೨೭ರ ಶುಕ್ರವಾರ ಸರ್ವ ಜನಾಂಗದ ಮುಖಂಡರು ಹಾಗೂ ಸಂಘಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ತಾಲೂಕು ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವವನ್ನು ಅಚರಿಸುತ್ತೇವೆ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ತಿಳಿಸಿದರು.
ಯುವ ಮುಖಂಡ ಎಂ.ಎನ್. ಜೈಪ್ರಕಾಶ್ ಮಾತನಾಡಿ, ನಾಡಿನ ಜನರ ಏಳಿಗೆಗೆಗಾಗಿ ದುಡಿದಂತಹ ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣನವರು, ಕೆಂಪೇಗೌಡರು ಹಾಗೂ ಇತರೆ ಮಹನೀಯರ ಜಯಂತಿಯ ಆಚರಣೆಯನ್ನು ಇತ್ತೀಚಿನ ವರ್ಷಗಳಲ್ಲಿ ಒಂದು ಜಾತಿಗೆ ಸೀಮಿತಗೊಳಿಸಿ ಆಚರಿಸುವ ವ್ಯವಸ್ಥೆ ಇದ್ದು, ಇದು ಮೊದಲು ತೊಲಗಬೇಕು. ಮತ್ತು ಎಲ್ಲಾ ಜನಾಂಗದವರು ಮಹನೀಯರ ಜಯಂತ್ಯುತ್ಸವದಲ್ಲಿ ಭಾಗಿಯಾಗುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳು ಹಾಗೂ ಮಹನೀಯರ ಜಯಂತಿ ಆಚರಣೆಗಳಲ್ಲಿ ಕೆಲವು ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಕಾರ್ಯಕ್ರಮಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ರಜಾದಿನವನ್ನು ಅನುಭವಿಸಲು ತೆರಳುತ್ತಾರೆ, ಇದರ ಬಗ್ಗೆ ಸಾಕಷ್ಟು ಭಾರಿ ಆಕ್ಷೇಪ ವ್ಯಕ್ತಪಡಿಸಲಾಗಿದೆ ಮತ್ತು ಪತ್ರಿಕೆಗಳಲ್ಲೂ ವರದಿಯಾಗಿದೆ. ಆದರೆ ಯಾವುದೇ ಅಧಿಕಾರಿ ಮೇಲೆ ಕ್ರಮಕೈಗೊಂಡ ನಿದರ್ಶನವಿಲ್ಲವೆಂದು ಎಂದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು ಮತ್ತು ಗೈರಾಗಿರುವ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಿ ಹಾಗೂ ಆ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಅಧಿಕಾರಿಗಳಿಗೂ ಒಂದು ನಕಲು ಕಳುಹಿಸಿ ಎಂದು ತಿಳಿಸಿದ್ದರು. ಇಲಾಖೆಯ ಕೆಲಸ ಕಾರ್ಯಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಸಭೆಯನ್ನು ಮುಂದೂಡಿದ್ದರು. ಆದರೆ ಮಂಗಳವಾರವೂ ಕೆಲವು ಇಲಾಖೆಗಳ ಅಧಿಕಾರಿಗಳು ಗೈರಾಗುವ ಮೂಲಕ ತಾಲೂಕು ದಂಡಾಧಿಕಾರಿಯ ಎಚ್ಚರಿಕೆಗೂ ಕಿಮ್ಮತ್ತು ನೀಡಿಲ್ಲ.ಪುರಸಭಾಧ್ಯಕ್ಷ ಪ್ರಸನ್ನ, ತಾ.ಪಂ. ಇಒ ಮುನಿರಾಜು, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ವೃತ್ತ ನಿರೀಕ್ಷಕ ಪ್ರದೀಪ್, ಬಿಇಒ ಸೋಮಲಿಂಗೇಗೌಡ, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿ, ಅಗ್ನಿಶಾಮಕ ಠಾಣೆಯ ಅಧಿಕಾರಿ ಸೋಮಶೇಖರ್, ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ. ತಿಪ್ಪೇಸ್ವಾಮಿ, ಉಪ ತಹಸೀಲ್ದಾರ್ ರೂಪೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಮುಖಂಡರಾದ ಜೈಪ್ರಕಾಶ್, ಮಳಲಿ ನಾರಾಯಣ್, ಜವರೇಗೌಡ ಇತರರು ಇದ್ದರು.