ಕನ್ನಡಪ್ರಭ ವಾರ್ತೆ ಚಾಮರಾಜನಗರಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಈ ಕೂಡಲೇ ಅವರ ದೇಶಕ್ಕೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಜಿಲ್ಲಾ ಬಿಜೆಪಿ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲೂ ಪಾಕಿಸ್ತಾನಿ ಪ್ರಜೆಗಳಿದ್ದರೆ ಪತ್ತೆ ಹಚ್ಚಿ ಗಡಿಪಾರು ಮಾಡಬೇಕೆಂದು ಮನವಿ ಮಾಡಿತು. ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್, ಏ.೨೨ ರಂದು ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ನೆರವಿನಿಂದ ೨೬ ಜನ ಅಮಾಯಕ ಭಾರತೀಯ ಪ್ರಜೆಗಳನ್ನು ಉಗ್ರರು ಧರ್ಮವನ್ನು ಕೇಳಿ ತಿಳಿದು ಗುಂಡಿಕ್ಕಿ ಕೊಂದಿರುವುದನ್ನು ನೋಡಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ.
ಅತ್ಯಂತ ದಾರುಣವಾದಂತಹ ದಾಳಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್ಐ ನೆರವಿನಿಂದ ಪಾಕಿಸ್ತಾನ ಸೇನೆ ಇಡೀ ದಾಳಿಯ ಯೋಜನೆಯನ್ನು ರೂಪಿಸಿ ಇಂತಹ ಬರ್ಬರ ಹತ್ಯಾಕಾಂಡವನ್ನು ಅರಗಿಸಿಕೊಳ್ಳಲಾಗದೆ ಇಡೀ ದೇಶ ಅತ್ಯಂತ ದೊಡ್ಡ ಆಘಾತಕ್ಕೊಳಗಾಗಿದೆ ಹಾಗೂ ಜಗತ್ತಿನ ಎಲ್ಲ ದೊಡ್ಡ ಶಕ್ತಿಶಾಲಿ ರಾಷ್ಟ್ರಗಳು ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿವೆ.ಪ್ರಧಾನಿ ನರೇಂದ್ರ ಮೋದಿ ಈ ಕುಕೃತ್ಯಕ್ಕೆ ಕಾರಣರಾದವರು ಯಾರೇ ಆಗಿರಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ದರೂ ಅವರನ್ನು ಸೆದೆಬಡಿಯಲು ಸೇನಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅನುಮತಿ ನೀಡಿದ್ದಾರೆ ಎಂದರು. ಈ ದುರ್ಘಟನೆಯ ನಂತರದಲ್ಲಿ ಕೇಂದ್ರ ಸರ್ಕಾರವು ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಇತಿಶ್ರೀ ಹಾಡಿ ಐತಿಹಾಸಿಕ ನಿರ್ಣಯ ತೆಗೆದುಕೊಂಡಿರುವುದು ಮಾತ್ರವಲ್ಲದೇ ಪಾಕಿಸ್ತಾನದೊಂದಿಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿ ಹಾಗೂ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವ ವೀಸಾ ನಿಲ್ಲಿಸಿದೆ. ಹಾಗೂ ನಿಯಮಿತ ಸಮಯದಲ್ಲಿ ಭಾರತರಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳು ೨೪ ಗಂಟೆಯೊಳಗೆ ಹಿಂತಿರುಗುವಂತೆ ಕಟ್ಟಾಜ್ಞೆ ಹೊರಡಿಸಿದೆ. ಆದರೂ ಕೂಡ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಪಾಕಿಸ್ತಾನಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದ್ದು ರಾಜ್ಯದಲ್ಲಿ ಪಾಕಿಸ್ತಾನಿಗಳು ಅಕ್ರಮವಾಗಿ ವಾಸ ಮಾಡುತ್ತಿರುವ ಗುಮಾನಿ ಇದೆ. ರಾಜ್ಯ ಸರ್ಕಾರ ದೇಶದ ಹಿತದೃಷ್ಟಿಯಿಂದ ಅಂತಹವರನ್ನು ಪತ್ತೆಹಚ್ಚಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಇದು ಅತ್ಯಂತ ಪ್ರಬಲವಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಹಾಗಾಗಿ ಅಂತಹ ವ್ಯಕ್ತಿಗಳನ್ನು ಪಟ್ಟಿಮಾಡಿ ಯಾವುದೇ ವಿಳಂಬ ಮಾಡದೇ ಈ ಕೂಡಲೇ ಎಲ್ಲಾ ಕಾನೂನು ಬದ್ಧವಾದ ಕ್ರಮವನ್ನು ಈ ಕೂಡಲೇ ತೆಗೆದುಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಸ್ಥಳೀಯ ಆಡಳಿತ ವ್ಯವಸ್ಥೆಯು ಶೀಘ್ರವಾಗಿ ಹಾಗೂ ನಿರ್ಣಾಯಕವಾದ ಕಾರ್ಯನಿರ್ವಹಿಸಿ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸಿ, ತಕ್ಷಣವೇ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ನಿಯೋಗದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ, ಚೂಡಾ ಮಾಜಿ ಅಧ್ಯಕ್ಷರಾದ ಆರ್.ಸುಂದರ್, ಕುಲಗಾಣಶಾಂತಮೂರ್ತಿ, ಬಾಲಸುಬ್ರಹ್ಮಣ್ಯಂ, ಮಂಡಲ ಅಧ್ಯಕ್ಷ ಶಿವರಾಜ್, ಸಿ.ಮಹದೇವಪ್ರಸಾದ್, ವೃಷಬೇಂದ್ರಸ್ವಾಮಿ, ಅನಿಲ್, ಟಗರ್‌ಪುರ ರೇವಣ್ಣ, ತಾಪಂ ಮಾಜಿ ಅಧ್ಯಕ್ಷ ರವೀಶ್, ಜಿಲ್ಲಾ ಕಾರ್ಯದರ್ಶಿ ನಟರಾಜು, ನಗರಸಭಾ ಮಾಜಿ ಸದಸ್ಯ ಶಿವಣ್ಣ, ಆನಂದ್ ಭಗೀರಥ್, ರಾಮಸಮುದ್ರ ಶಿವಣ್ಣ, ವೇಣುಗೋಪಾಲ್, ಮುಕುಂದ, ಕೇಬಲ್ ರಂಗಸ್ವಾಮಿ, ಶ್ರೀನಿವಾಸಮೂರ್ತಿ, ಮುರುಗೇಶ್, ಪ್ರವೀಣ್ ಇತರರು ಇದ್ದರು.