ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಈ ಶಾಶ್ವತ ಚಿತ್ರಾತ್ಮಕ ಮುದ್ರೆಯು ವಿಶ್ವದ ಪ್ರವಾಸಿಗರಿಗೆ ದೊಡ್ಡ ಗಡಿಯಾರದ ಮಹತ್ವವನ್ನು ತಿಳಿಸುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ಶಾಶ್ವತ ಚಿತ್ರಾತ್ಮಕ ಮುದ್ರೆಗಳು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಆ ಸ್ಥಳದ ಪ್ರಾಮುಖ್ಯತೆಯನ್ನು ಜಗತ್ತಿಗೆ ಪ್ರಚುರಪಡಿಸುತ್ತವೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್ ತಿಳಿಸಿದರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಭಾರತೀಯ ಅಂಚೆ ಹೊರ ತಂದಿರುವ ಮೈಸೂರಿನ ದೊಡ್ಡ ಗಡಿಯಾರ (ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್) ಶಾಶ್ವತ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು, ಈ ಶಾಶ್ವತ ಚಿತ್ರಾತ್ಮಕ ಮುದ್ರೆಯು ವಿಶ್ವದ ಪ್ರವಾಸಿಗರಿಗೆ ದೊಡ್ಡ ಗಡಿಯಾರದ ಮಹತ್ವವನ್ನು ತಿಳಿಸುತ್ತದೆ ಎಂದರು.ಮೈಸೂರು ಅಂಚೆ ವಿಭಾಗದ ಉಪ ಅಧೀಕ್ಷಕ ವಿ.ಎಲ್. ನವೀನ್ ಮಾತನಾಡಿ, ದೊಡ್ಡ ಗಡಿಯಾರ ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದು ನಗರದ ಹೆಗ್ಗುರುತಾಗಿದೆ. ಇನ್ನೆರಡು ವರ್ಷಗಳಲ್ಲಿ ದೊಡ್ಡ ಗಡಿಯಾರ ನಿರ್ಮಾಣವಾಗಿ 100 ವರ್ಷಗಳಾಗಲಿದ್ದು, ಅಂಚೆ ಇಲಾಖೆ ವಿಶೇಷ ಲಕೋಟೆ ಅಥವಾ ಚಿತ್ರಿತ ಅಂಚೆ ಕಾರ್ಡ್ ಅನ್ನು ಹೊರತರುವ ಆಶಯವನ್ನು ಹೊಂದಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆಪಾಲಕ ಸೋಮಯ್ಯ ಮಾತನಾಡಿ, ದೊಡ್ಡ ಗಡಿಯಾರದ ಶಾಶ್ವತ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆ ಮಾಡುವ ಮೂಲಕ ಅಂಚೆ ಇಲಾಖೆ ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಲಕ್ಷ್ಮೀಪುರಂ ಅಂಚೆ ಕಚೇರಿಯ ಪ್ರಭಾರ ಅಂಚೆ ಪಾಲಕ ಬಿ. ಮಹದೇವಸ್ವಾಮಿ ಇದ್ದರು. ನಿವೇದಿತಾ ಪ್ರಾರ್ಥಿಸಿದರು. ಮಾರುಕಟ್ಟೆ ವ್ಯವಸ್ಥಾಪಕ ಡಾ. ಅಮ್ಮಸಂದ್ರ ಸುರೇಶ್ ಸ್ವಾಗತಿಸಿದರು. ರೇಣುಕಾ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.