ಹದವಾದ ಮಳೆ, ಬಿತ್ತನೆ ತವಕದಲ್ಲಿ ನರಗುಂದ ತಾಲೂಕಿನ ರೈತರು

KannadaprabhaNewsNetwork |  
Published : May 25, 2025, 02:25 AM IST
(23ಎನ್.ಆರ್.ಡಿ4 ತಾಲೂಕಿನ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಜಮೀನ ಸಜ್ಜುಗೊಳಸುತ್ತಿದ್ದಾರೆ.)       | Kannada Prabha

ಸಾರಾಂಶ

ನರಗುಂದ ತಾಲೂಕಿನಲ್ಲಿ ಮುಂಗಾರು ಪೂರ್ವದ ಮಳೆ ಹದವಾಗಿ ಸುರಿದಿದ್ದು, ಉಳುಮೆ ಮಾಡಲು ರೈತರಿಗೆ ಅನುಕೂಲವಾಗಿದೆ. ಜೂ. 25ರಂದು ಪ್ರಾರಂಭವಾಗುವ ರೋಹಿಣಿ ಮಳೆ ಮೇಲೆ ನಿರೀಕ್ಷೆ ಇದ್ದು, ರೈತರು ಮುಂಗಾರು ಬೀಜಗಳ ಬಿತ್ತನೆ ತವಕದಲ್ಲಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನಲ್ಲಿ ಮುಂಗಾರು ಪೂರ್ವದ ಮಳೆ ಹದವಾಗಿ ಸುರಿದಿದ್ದು, ಉಳುಮೆ ಮಾಡಲು ರೈತರಿಗೆ ಅನುಕೂಲವಾಗಿದೆ. ಜೂ. 25ರಂದು ಪ್ರಾರಂಭವಾಗುವ ರೋಹಿಣಿ ಮಳೆ ಮೇಲೆ ನಿರೀಕ್ಷೆ ಇದ್ದು, ರೈತರು ಮುಂಗಾರು ಬೀಜಗಳ ಬಿತ್ತನೆ ತವಕದಲ್ಲಿದ್ದಾರೆ.

ಕಳೆದೊಂದು ವಾರದಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಈಗಾಗಲೇ ಬಿತ್ತನೆಗೆ ಅವಶ್ಯವಿರುವ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆ ಕೂಡ ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ, ಮತ್ತಿತರ ಕೃಷಿ ಪರಿಕರಗಳ ವಿತರಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಕೃಷಿ ಇಲಾಖೆ ತಾಲೂಕಿಗೆ ಬೇಕಾದ ಬೀಜ, ರಸಗೊಬ್ಬರ ತರಿಸಿಕೊಳ್ಳಲು ಮುಂದಾಗುತ್ತಿದೆ.

ಕೃಷಿ ಇಲಾಖೆ ಪ್ರಸಕ್ತ ವರ್ಷ ವಾಣಿಜ್ಯ ಬೆಳೆಗಳಾದ ಗೋವಿನ ಜೋಳ 13000 ಹೆ, ಹೆಸರುಕಾಳು 16700 ಹೆ, ಬಿ.ಟಿ. ಹತ್ತಿ 4680 ಹೆ, ತೊಗರಿ 250 ಹೆ, ಸರ್ಯಕಾಂತಿ 240 ಹೆಕ್ಟೇರ್‌ ಸೇರಿ ಒಟ್ಟು 34870 ಹೆ ಪ್ರದೇಶದಲ್ಲಿ ಮುಂಗಾರಿ ಹಂಗಾಮಿನಲ್ಲಿ ಬಿತ್ತನೆ ಗುರಿ ಹೊಂದಿದೆ ಎಂದು ಕೃಷಿ ಅಧಿಕಾರಿಗಳು ಹೇಳಿದರು.

2024-25ನೇ ಸಾಲಿನಲ್ಲಿ ಏಪ್ರಿಲ್‌ ತಿಂಗಳಲ್ಲಿ 28.2 ಮಿ ಮೀ, ಮೇದಲ್ಲಿ 72.ಮಿಲಿ ಮೀ ಮಳೆ ಆಗಿತ್ತು. ಈ ವರ್ಷ ಏಪ್ರಿಲ್‌ದಲ್ಲಿ 110 ಮಿ ಮೀ, ಮೇ-73.5 ಮೀ ಮೀ ಮಳೆ ಆಗಿದೆ ಎಂದು ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ತಿಳಿಸಿದರು.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೇಕಾದ ಕಾಂಪ್ಲೆಕ್ಸ್‌ ಮತ್ತು ಯೂರಿಯಾ ಸೇರಿ ಒಟ್ಟು 2550 ಮೆಟ್ರಿಕ್ ಟನ್ ಗೊಬ್ಬರ ಗೋದಾಮಿಗಳಲ್ಲಿ ಸಂಗ್ರಹವಿದೆ. ರೈತರ ಬೇಡಿಕೆ ಅನುಸಾರ ಹಂತ ಹಂತವಾಗಿ ಗೊಬ್ಬರವನ್ನು ತರಿಸಲಾಗುವುದೆಂದು ಅಧಿಕಾರಿಗಳು ಹೇಳಿದರು.

ಪ್ರಸಕ್ತ ವರ್ಷಕ್ಕೆ ಬೇಕಾಗಿರುವ ಬೀಜಗಳಾದ ಹೆಸರು 80 ಕ್ವಿಂಟಲ್, ನರಗುಂದ ರೈತ ಸಂರ್ಪಕ ಕೇಂದ್ರ, 40 ಕ್ವಿಂಟಲ್ ಕೊಣ್ಣೂರ ರೈತ ಸಂರ್ಪಕ ಕೇಂದ್ರಗಳಲ್ಲಿ ಸಂಗ್ರಹವಿದೆ.

ಅಧಿಕಾರಿಗಳು ಸಭೆ: ಕೃಷಿ ಉಪ-ನಿರ್ದೇಶಕರು ಪಟ್ಟಣದ ತಾಪಂ ಸಭಾಭವನದಲ್ಲಿ ಈಚೆಗೆ ಸಭೆ ಮಾಡಿ ಜಿಲ್ಲೆಯಲ್ಲಿ ಈ ನರಗುಂದ ತಾಲೂಕು ಕೃಷಿ ಪ್ರಧಾನ ತಾಲೂಕಾಗಿದೆ. ಆದ್ದರಿಂದ ಕೃಷಿ ಅಧಿಕಾರಿಗಳು ಮತ್ತು ಖಾಸಗಿ ಬೀಜ ಮತ್ತು ರಸಗೊಬ್ಬರ, ವ್ಯಾಪಾರಸ್ಥ ರೈತರಿಗೆ ಬೇಕಾದ ಬೀಜ, ಗೊಬ್ಬರ, ಕೃಷಿ ಪರಿಕರಗಳ ಕೊರತೆಯಾಗದ ಹಾಗೆ ನೋಡಿಕೊಳ್ಳಬೇಕು. ಖಾಸಗಿ ವ್ಯಾಪಾರಸ್ಥರು ಬೀಜ ಮತ್ತು ಗೊಬ್ಬರವನ್ನು ಬೇರೆ ಜಿಲ್ಲೆ ಮತ್ತು ತಾಲೂಕಿನ ರೈತರಿಗೆ ಮಾರಾಟ ಮಾಡಬಾರದು, ಒಂದು ವೇಳೆ ಬೇರೆ ಜಿಲ್ಲೆ ತಾಲೂಕಿನ ರೈತರಿಗೆ ಈ ತಾಲೂಕಿನಿಂದ ಬೀಜ ಮತ್ತು ಗೊಬ್ಬರ ಮಾರಾಟ ಮಾಡಿದರೆ ಅಂಥ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುವ ಬೀಜ ಮತ್ತು ಗೊಬ್ಬರಗಳ ಬೆಲೆ ಬೋರ್ಡನ್ನು ಕಡ್ಡಾಯವಾಗಿ ಹಾಕಬೇಕು, ಒಂದು ವೇಳೆ ಅಂಗಡಿಕಾರರು ಬೋರ್ಡ್‌ ಹಾಕದಿದ್ದರೆ ಅಂಥವರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರತಿ ವರ್ಷ ಕೃಷಿ ಇಲಾಖೆ ಅಧಿಕಾರಿಗಳು ಈ ತಾಲೂಕಿಗೆ ಬೇಕಾದಷ್ಟು ಬೀಜ ಮತ್ತು ಗೊಬ್ಬರವನ್ನು ದಾಸ್ತಾನು ಮಾಡುವರು. ಆದರೆ ಈ ತಾಲೂಕಿನ ಅಕ್ಕ ಪಕ್ಕದ ತಾಲೂಕಿನ ರೈತರು ಇದೇ ತಾಲೂಕಿನಲ್ಲಿ ಬೀಜ, ಗೊಬ್ಬರ ಖರೀದಿ ಮಾಡುತ್ತಿರುವುದರಿಂದ ಈ ನರಗುಂದ ತಾಲೂಕಿನ ರೈತರಿಗೆ ಪ್ರತಿ ವರ್ಷ ಬೀಜ ಗೊಬ್ಬರದ ಅಭಾವ ಆಗುತ್ತಿದೆ. ಆದ್ದರಿಂದ ಈ ಬಗ್ಗೆ ಕೃಷಿ ಅಧಿಕಾರಿಗಳು ಬೇರೆ ತಾಲೂಕಿನ ರೈತರಿಗೆ ಬೀಜ, ಗೊಬ್ಬರ ಮಾರಾಟ ಮಾಡಬಾರದೆಂದು ಖಾಸಗಿ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವ ಅಂಗಡಿಗಳಿಗೆ ನೋಟಿಸ್‌ ನೀಡಲು ಮುಂದಾಗಬೇಕೆಂದು ರೈತರ ಆಗ್ರಹವಾಗಿದೆ.

ತಾಲೂಕಿನಲ್ಲಿ ಪ್ರಸಕ್ತ ವರ್ಷ ಕೃತಿಕಾ ಮಳೆ ಉತ್ತಮವಾಗಿದೆ. ರೈತರು ಸ್ವಲ್ಪ ಮಳೆ ಕಡಿಮೆಯಾದ ತಕ್ಷಣ ಮುಂಗಾರು ಹಂಗಾಮಿನ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ತೊಗರಿ, ಬಿತ್ತನೆ ಮಾಡಲು ಪ್ರಾರಂಭ ಮಾಡುವರು. ಆದ್ದರಿಂದ ಕೃಷಿ ಇಲಾಖೆಯವರು ರೈತರಿಗೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದ ಹಾಗೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಸೊಪ್ಪಿನ ಹೇಳಿದರು.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ತಾಲೂಕಿನ ರೈತರು ಬಿತ್ತನೆ ಸಮಯದಲ್ಲಿ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ಮುಂದಿನ ದಿನಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಸಿಡಿ ರೋಗ ಬರುವುದಿಲ್ಲ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?