ತಗಡಿನ ಶೆಡ್ ನಲ್ಲಿ ಅಂಗನವಾಡಿ ಕೇಂದ್ರ ಕಂಡು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಶಾಕ್

KannadaprabhaNewsNetwork |  
Published : Sep 12, 2026, 01:45 AM IST
11ಕೆಎಂಎನ್ ಡಿ11  | Kannada Prabha

ಸಾರಾಂಶ

ಕೃಷ್ಣಮೂರ್ತಿ ಎಂದು ಹೆಸರಿಟ್ಟುಕೊಂಡು ಬರೀ ಕಳ್ಳಾಟ ಆಡ್ತಿದ್ದೀರಾ. ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಕೇಳಿದರೆ ತಾಲೂಕಿನಲ್ಲಿರುವ 366 ಅಂಗನವಾಡಿ ಕೇಂದ್ರಗಳು ಉತ್ತಮವಾಗಿವೆ. ಮೂಲ ಸೌಕರ್ಯಗಳ ಕೊರತೆ ಇಲ್ಲ ಎಂದು ಸುಳ್ಳು ಹೇಳ್ತೀರಾ ಎಂದು ಸಿಡಿಪಿಒ ವಿರುದ್ಧ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಾರ್ ಶೆಡ್‌ಗಿಂತಲೂ ಅಧ್ವಾನವಾಗಿರುವ ತಗಡಿನ ಶೆಡ್‌ನಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದೀರಲ್ಲಾ. ಇಲ್ಲಿಗೆ ಬರುವ ಮಕ್ಕಳು ಮನುಷ್ಯರಲ್ಲವೇ? ಇದನ್ನು ಅಂಗನವಾಡಿ ಎನ್ನುತ್ತಾರಾ? ನೀವು ಏನೂ ಮಾಡಲು ಬರ್ತೀರಾ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಕಸಬಾ ಹೋಬಳಿಯ ಕರಡಹಳ್ಳಿ ಬುಡಬುಡಕೆ ಕಾಲೋನಿಯ ಅಂಗನವಾಡಿ ಕೇಂದ್ರಕ್ಕೆ ಶುಕ್ರವಾರ ಬೆಳಗ್ಗೆ ದಿಢೀರ್ ಭೇಟಿ ಕೊಟ್ಟ ಉಪಲೋಕಾಯುಕ್ತರು, ಮಕ್ಕಳು ಕೂರಲು ಸ್ಥಳವಿಲ್ಲದೆ, ಗಾಳಿ ಬೆಳಕಿಲ್ಲದ ತಗಡಿನ ಶೀಟ್‌ನಿಂದ ನಿರ್ಮಿಸಿರುವ 7x10 ಅಡಿಯ ಚಿಕ್ಕ ಶೆಡ್‌ನಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿರುವುದನ್ನು ಕಂಡು ಶಾಕ್ ಆಗಿ ಅಧಿಕಾರಿಗಳನ್ನು ಹಿಗ್ಗಾಮಗ್ಗಾ ಜಾಡಿಸಿದರು.

ಶೆಡ್‌ನಂತಿರುವ ಅಂಗನವಾಡಿ ಕೇಂದ್ರದ ಬೀಗ ತೆಗೆಸಿ ಒಳ ಪ್ರವೇಶಿಸಿದ ಉಪಲೋಕಾಯುಕ್ತರು, ಮಕ್ಕಳು ಕೂರಲು ಸ್ಥಳವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಕಿಟಕಿಯಿಲ್ಲ, ಶೌಚಾಲಯವಿಲ್ಲ, ಅಡುಗೆ ಕೊಠಡಿಯೂ ಇಲ್ಲ. ಕಾರ್‌ಶೆಡ್‌ಗಿಂತಲೂ ಕಡೆಯಾಗಿರುವ ಇದನ್ನು ಅಂಗನವಾಡಿ ಕೇಂದ್ರ ಎನ್ನುತ್ತಾರಾ? ವ್ಯಾಪಾರ ಮಾಡ್ಕೋತಿರಾ, ಮನೆಗೆ ಹೋಗ್ತಿರಾ, ಇದೇ ಜೀವನ ನಿಮ್ದೆಲ್ಲಾ ಎಂದು ಕಿಡಿಕಾರಿದರು.

ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ. ನೀವೆಲ್ಲಾ ಏನು ಮಾಡ್ತಿದ್ದೀರಿ. ತಗಡಿನ ಶೆಡ್‌ನಲ್ಲಿ ನಡೆಸುತ್ತಿರುವ ಅಂಗನವಾಡಿ ಕೇಂದ್ರದ ಬಗ್ಗೆ ಏನು ಶಿಫಾರಸ್ಸು ಮಾಡಿದ್ದೀರಿ ತೋರಿಸಿ? ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ನಾನು ಮಾತನಾಡ್ತೀನಿ ಎಂದು ಸಿಡಿಪಿಒ ಮತ್ತು ಗ್ರಾಪಂ ಪಿಡಿಒಗೆ ಬೆವರಿಳಿಸಿದರು.

ಏಯ್.... ಇಒ ನಿಮಗೆ ಹೇಳುವವರು, ಕೇಳುವವರು ಗತಿಯಿಲ್ಲ. ಕುಡಿಯುವ ನೀರು, ಶೌಚಾಲಯ ಎಲ್ಲಿದೆ? ಗಾಳಿ- ಬೆಳಕಿಲ್ಲದ ಈ ಶೆಡ್‌ನ ಬಾಗಿಲು ಮುಚ್ಚಿದರೆ ಮಕ್ಕಳು ಒಳಗೆ ಸತ್ತು ಹೋಗ್ತಾರೆ. ಈ ತಗಡಿನ ಶೆಡ್‌ನಲ್ಲಿ 12 ಮಕ್ಕಳಿದ್ದಾರೆಂದು ಯಾರಿಗೆ ಹೇಳಿದ್ದೀರಿ. ಎಷ್ಟು ದಿನ ಇಲ್ಲಿಗೆ ಭೇಟಿ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಅರಣ್ಯವಾಸಿಗಳೂ ಸಹ ಈ ರೀತಿ ಬದುಕುವುದಿಲ್ಲ. ಈ ಮಕ್ಕಳನ್ನು ಅವರಿಗಿಂತಲೂ ಅಧ್ವಾನ ಮಾಡಿಟ್ಟಿದ್ದೀರಿ. ಈ ಗ್ರಾಮಕ್ಕೆ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ತಾಪಂ ಇಒ ಸತೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೃಷ್ಣಮೂರ್ತಿ ಎಂದು ಹೆಸರಿಟ್ಟುಕೊಂಡು ಬರೀ ಕಳ್ಳಾಟ ಆಡ್ತಿದ್ದೀರಾ. ಕಚೇರಿಗೆ ಭೇಟಿ ಕೊಟ್ಟು ಮಾಹಿತಿ ಕೇಳಿದರೆ ತಾಲೂಕಿನಲ್ಲಿರುವ 366 ಅಂಗನವಾಡಿ ಕೇಂದ್ರಗಳು ಉತ್ತಮವಾಗಿವೆ. ಮೂಲ ಸೌಕರ್ಯಗಳ ಕೊರತೆ ಇಲ್ಲ ಎಂದು ಸುಳ್ಳು ಹೇಳ್ತೀರಾ ಎಂದು ಸಿಡಿಪಿಒ ವಿರುದ್ಧ ಹರಿಹಾಯ್ದರು.

ಈ ವೇಳೆ ಉಪಲೋಕಾಯುಕ್ತರ ಉಪ ನಿಬಂಧಕ ಎನ್.ವಿ.ಅರವಿಂದ್, ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳೂ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶೋತ್ಸವದಲ್ಲಿ ಪಿಒಪಿ ಮೂರ್ತಿಗೆ ಅವಕಾಶವಿಲ್ಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಕುಂಭಾಭಿಷೇಕ