ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ

KannadaprabhaNewsNetwork |  
Published : Mar 15, 2025, 01:06 AM IST
14ಎಚ್‌ಪಿಟಿ1- ಹೊಸಪೇಟೆ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ. | Kannada Prabha

ಸಾರಾಂಶ

ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ನೇತೃತ್ವದ ತಂಡ ಶುಕ್ರವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನಗರಸಭೆ, ತಹಸೀಲ್ದಾರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಹುಡಾ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ, ಕಾರ್ಮಿಕ ಇಲಾಖೆ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಆರ್‌ಟಿಒ ಕಚೇರಿ, ಬಾಲಕರ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿತು.

ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ, ಕಡತಗಳ ಪರಿಶೀಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ನೇತೃತ್ವದ ತಂಡ ಶುಕ್ರವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನಗರಸಭೆ, ತಹಸೀಲ್ದಾರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಹುಡಾ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ, ಕಾರ್ಮಿಕ ಇಲಾಖೆ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಆರ್‌ಟಿಒ ಕಚೇರಿ, ಬಾಲಕರ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿತು.

ಎಪಿಎಂಸಿ ಅವ್ಯವಸ್ಥೆ ಗರಂ:

ನಗರದ ಎಪಿಎಂಸಿಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳಿಗೆ ಮೈಚಳಿ ಬಿಡಿಸಿದರು. ದಿನನಿತ್ಯ ನಡೆಯುವ ತರಕಾರಿ ಮಾರುಕಟ್ಟೆಯಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಲಭ್ಯತೆ, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದನ್ನು ಕಂಡು, ನಮಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತೀಯಾ, ಉತ್ಪನ್ನಗಳ ಗುಣಮಟ್ಟ, ಕ್ರಮಬದ್ಧ ವಹಿವಾಟು ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿಗೆ ತರಾಟೆ ತೆಗೆದುಕೊಂಡರು.

ಇದೇ ವೇಳೆ ವೀರೇಶ್ ಎಂಬವರು ಎಪಿಎಂಸಿಯಲ್ಲಿ ರೈತರಿಂದ ಶೇ.10ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಸಂತೆಯಲ್ಲಿ ಬಟಾಣಿಗೆ ಕಲರ್ ಹಾಕಿ ಮಾರುತ್ತಿರುವುದು ಕಂಡು ಲೋಕಾಯುಕ್ತರು ಆಹಾರ ಸುರಕ್ಷತಾ ಅಧಿಕಾರಿಗೆ ಪರಿಶೀಲಿಸಲು ಸೂಚಿಸಿದರು. ಕೆಲ ಟ್ರೇಡರ್ಸ್‌ನ ರಸೀದಿ ಪುಸ್ತಕವನ್ನು ಪರಿಶೀಲಿಸಿದರು.

ರೈತರಿಂದ ಕಮಿಷನ್ ಸಂಗ್ರಹಿಸುವುದು ತಪ್ಪು. ಹಾಗೇನಾದರೂ ಸಂಗ್ರಹಿಸುತ್ತಿದ್ದರೇ ಕೂಡಲೇ ಕೈಬಿಡಬೇಕು ಇಲ್ಲದಿದ್ದರೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಪಿಎಂಸಿ ಕಾರ್ಯದರ್ಶಿಗೆ ಖಡಕ್‌ ಸೂಚನೆ ನೀಡಿದರು. ದಲಾಲಿ ಅಂಗಡಿಗಳಿಗೆ ಹಂಚಿಕೆಯಾದ ಸಂಪೂರ್ಣ ವಿವರದೊಂದಿಗೆ ವರದಿ ನೀಡಲು ಸೂಚಿಸಿದರು.

ತೂಕದಲ್ಲಿ 2 ಕೆಜಿ ವ್ಯತ್ಯಾಸ:

ಎಪಿಎಂಸಿ ಆಡಳಿತ ಕಚೇರಿಗೆ ತೆರಳಿ ತೂಕದ ಯಂತ್ರವನ್ನು ಪರಿಶೀಲಿಸಿದರು. ಖುದ್ದು ಉಪಲೋಕಾಯುಕ್ತರು ಯಂತ್ರದ ಮೇಲೆ ನಿಂತು ತೂಕ ಪರೀಕ್ಷಿಸಿದರು. ಆದರೆ 2 ಕೆಜಿಯಷ್ಟು ವ್ಯತ್ಯಾಸ ಕಂಡು ಬಂದಿದ್ದು, ಯಂತ್ರವನ್ನು ಸೀಜ್ ಮಾಡಿ ಪ್ರಕರಣ ದಾಖಲಿಸುವಂತೆ ತೂಕ ಮತ್ತು ಅಳತೆ ಅಧಿಕಾರಿ ಅಮೃತ್ ಚೌವ್ಹಾಣ್‌ಗೆ ಆದೇಶಿಸಿದರು. ಬಳಿಕ ಅಪೂರ್ಣ ಹಾಜರಾತಿ ಪುಸ್ತಕ, ಎಪಿಎಂಸಿ ಅಧಿಕಾರಿಗಳ ಪೋನ್‌ಪೇ, ಗೂಗಲ್‌ಪೇ ಪರಿಶೀಲಿಸಿದರು. ಚಲನವಲನ ಪುಸ್ತಕ ನಮೂದು ಆಗದಿರುವುದನ್ನು ಕಂಡು ಗರಂ ಆದ ಉಪಲೋಕಾಯುಕ್ತ ಬಿ.ವೀರಪ್ಪ ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಮತ್ತು ಲೆಕ್ಕ ಪರೀಕ್ಷಕ ಕೆ.ರಾಜು ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು.

ಆಹಾರ ವಿಷಕಾರಿ:

ಬಳಿಕ ನಗರದ 88 ಮುದ್ಲಾಪುರ ಬಳಿಯ ಒಳಚರಂಡಿ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಳಚೆ ಚರಂಡಿ ನೀರನ್ನು ನೇರ ಕೃಷಿ ಬಳಕೆಗೆ ಹರಿಸುತ್ತಿರುವುದನ್ನು ಗಮನಿಸಿದ ಉಪ ಲೋಕಾಯುಕ್ತರು ಇಂತಹ ಕಲುಷಿತ ನೀರಿನಿಂದ ಬೆಳೆದ ಬೆಳೆಯಿಂದ ಜನಸಾಮಾನ್ಯರಿಗೆ ಆಹಾರ ವಿಷಕಾರಿಯಾಗಲಿದೆ. ಸಂಸ್ಕರಣಾ ಘಟಕದಲ್ಲಿ ನೀರಿನ ಶುದ್ಧೀಕರಣ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ, ಇದರಿಂದ ನದಿ ನೀರು ಮಲಿನಗೊಳ್ಳಲಿದೆ. ಪರಿಸರ ಅಧಿಕಾರಿ ಯಾವ ಪ್ರಕರಣ ದಾಖಲಿಸಿಲ್ಲ, ನಗರಸಭೆ ಹಾಗೂ ಪರಿಸರ ಇಲಾಖೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದರು.

ನಗರಸಭೆಯಲ್ಲಿ ಪರಿಶೀಲನೆ:

ನಗರಸಭೆ ನೀಡಿದ ಟ್ರೇಡ್‌ ಲೈಸೆನ್ಸ್‌, ಸ್ಲಂ ಬೋರ್ಡ್‌ನಿಂದ ಮನೆಗಳ ಹಕ್ಕುಪತ್ರ ವಿತರಣೆ, ಸ್ವಚ್ಛತೆ, ಫಾರಂ-3 ಸೇರಿದಂತೆ ಕೆಲ ಕಡತಗಳ ಮಾಹಿತಿ ಪಡೆದರು. ಸ್ಲಂ ಬೋರ್ಡ್ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿ, ಇಲ್ಲಿ ಅಧಿಕಾರಿಗಳು, ಸಿಬ್ಬಂದಿ ಹೆಸರು ನಮೂದಾಗಿಲ್ಲ. ಸರ್ಕಾರಿ ಸುತ್ತೋಲೆ, ಆದೇಶಗಳ ಅನ್ವಯ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಫೋನ್‌ ಪೇನಲ್ಲಿ ಬಂದ ಹಣ ಯಾರದು?:

ಉಪ ನೋಂದಣಾಧಿಕಾರಿ ಪ್ರೇಮಾನಂದಗೆ ವಿಶ್ವನಾಥ ಎಂಬವರು ಎರಡು ಬಾರಿ ತಲಾ ₹25 ಸಾವಿರ ಫೋನ್‌ಪೇನಲ್ಲಿ ಪಾವತಿಸಿದ್ದರು. ಈ ಹಣ ಏಕೆ ಕಳುಹಿಸಿದ್ದಾರೆ? ತೆರಿಗೆ ಪಾವತಿಯಲ್ಲಿ ನಮೂದಿಸಲಾಗಿದೆಯೇ? ಈ ಬಗ್ಗೆ ವಿವರಣೆ ನೀಡಬೇಕು ಎಂದು ಎಚ್ಚರಿಸಿದರು.

ಹುಡಾ ಕಚೇರಿಗೆ ಭೇಟಿ:

ಹುಡಾ ಕಚೇರಿಗೆ ಭೇಟಿ ನೀಡಿ, ಭೂ ಪರಿವರ್ತನೆ ಕಡತ ಪರಿಶೀಲಿಸಿದರು. ಠರಾವು ಪುಸ್ತಕ ಪರಿಶೀಲನೆ ನಡೆಸಿ, ಜನವರಿಯಿಂದ ಎಷ್ಟು ಅರ್ಜಿ ಬಂದಿವೆ. ಸರಿಯಾಗಿ ಮಾಹಿತಿ ಒದಗಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಲೀಂ ಪಾಷಾ, ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ ಎಂ.ಶೃತಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!