ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಬಗ್ಗೆ ಯಾರಿಗೂ ತೃಪ್ತಿ ಇಲ್ಲ : ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Mar 15, 2025, 01:06 AM ISTUpdated : Mar 15, 2025, 12:35 PM IST
BY vijayendraa

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಅನ್ನು ಅವಲೋಕನ ಮಾಡಿದರೆ, ಆಯವ್ಯಯ ಪತ್ರವು ರಾಜ್ಯದ ಯಾವುದೇ ವರ್ಗದ ಜನರಿಗೆ ಸಂತೃಪ್ತಿ ತಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

 ವಿಧಾನಸಭೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಅನ್ನು ಅವಲೋಕನ ಮಾಡಿದರೆ, ಆಯವ್ಯಯ ಪತ್ರವು ರಾಜ್ಯದ ಯಾವುದೇ ವರ್ಗದ ಜನರಿಗೆ ಸಂತೃಪ್ತಿ ತಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ನಾಡಿನ ಕೃಷಿಕರು, ಬಡವರು, ಮಹಿಳೆಯರು, ಯುವಕರು ಸೇರಿ ಎಲ್ಲರಿಗೂ ಈ ಬಜೆಟ್ ನಿರಾಸೆಯನ್ನು ತಂದಿದೆ. ಯಾವುದೇ ಆದ್ಯತಾ ಕ್ಷೇತ್ರಗಳಿಗೂ ಗಮನಹರಿಸಿಲ್ಲ. ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಕಡೆ ಹೆಚ್ಚಿನ ಕಾಳಜಿ ತೋರಿಸಿಲ್ಲ. ಕೃಷಿ ಕ್ಷೇತ್ರದಲ್ಲಿ ರೈತರು ಪರದಾಡುತ್ತಿದ್ದು, ಅಡಿಕೆ ರೋಗ, ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಕಿಡಿಕಾರಿದರು.

ಈ ಹಿಂದೆ ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರು.ನಂತೆ ಒಟ್ಟು 50 ಸಾವಿರ ಕೋಟಿ ರು. ಕೊಟ್ಟು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಕೃಷ್ಣೆಯ ಬಗ್ಗೆ ಚಕಾರ ಎತ್ತಿಲ್ಲ. ಇದು ನಿಜವಾಗಿಯೂ ದುರದೃಷ್ಟಕರ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮರೀಚಿಕೆಯಾಗಿದೆ. ಬೆಲೆ ಏರಿಕೆಯ ಪರಿಣಾಮವಾಗಿ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಜನರ ಜೀವನದ ಮೇಲೆ ಬರೆ ಎಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿರುವುದು ಬಜೆಟ್‍ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹಣಕಾಸಿನ ಮುಗ್ಗಟ್ಟಿನಿಂದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪರಿಸ್ಥಿತಿಗೆ ರಾಜ್ಯ ಬಂದು ನಿಂತಿದೆ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗಮನ ಕೊಡುತ್ತಿಲ್ಲ. ಚೀನಾದಂತಹ ದೇಶದಿಂದ 1500ಕ್ಕೂ ಹೆಚ್ಚು ವಿಜ್ಞಾನಿಗಳು ಹೊರಬರುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾದ ನಮ್ಮ ರಾಜ್ಯದಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚು ಗಮನ ಕೊಡುತ್ತಿಲ್ಲ. 46,757 ಸರಕಾರಿ ಶಾಲೆಗಳಲ್ಲಿ 43 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 16,450 ಖಾಸಗಿ ಶಾಲೆಗಳಲ್ಲಿ 47 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಸರ್ಕಾರ ಶಿಕ್ಷಣದ ಕುರಿತು ಯಾವ ರೀತಿ ಗಮನ ಹರಿಸುತ್ತಿದೆ ಎಂಬುದರ ಕುರಿತು ಚರ್ಚೆ ನಡೆಯಬೇಕಿದೆ ಎಂದರು.

ಪ್ರಾದೇಶಿಕ ಅಸಮತೋಲನ:

ಪ್ರಾದೇಶಿಕ ಅಸಮತೋಲನದ ಕುರಿತು ಹೆಚ್ಚು ಚರ್ಚೆಯಾಗಿದೆ. ಆದರೆ, ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನ ವಿಷಯದಲ್ಲಿ ಹೆಚ್ಚು ಗಮನ ಹರಿಸದೆ ಇರುವುದು ದುರ್ದೈವ. 2004-05ರಲ್ಲಿ ಸಿದ್ದರಾಮಯ್ಯನವರು ಮೊದಲ ಬಜೆಟ್ ಮಂಡಿಸಿದಾಗ ಬಜೆಟ್ ಗಾತ್ರ ಸುಮಾರು 13-14 ಸಾವಿರ ಕೋಟಿ ಇತ್ತು. ಆದರೆ, ಇವತ್ತು 16ನೇ ಬಜೆಟ್ ಮಂಡಿಸಿದ್ದು 4.9 ಲಕ್ಷ ಕೋಟಿ. ಈ ಬಾರಿ ಕೊರತೆ ಬಜೆಟ್ ಮಂಡಿಸಲಾಗಿದೆ ಎಂದು ಟೀಕಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...