ನಗರದಲ್ಲಿ ಉಪ ತಹಸೀಲ್ದಾರ್ ನೇಣಿಗೆ ಶರಣು

KannadaprabhaNewsNetwork |  
Published : Jun 01, 2026, 01:30 AM IST
 ತಿಮ್ಮಯ್ಯ (52) ಅವರು ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. | Kannada Prabha

ಸಾರಾಂಶ

ತಿಮ್ಮಯ್ಯ ಅವರು ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಲಾಡ್ಜಲ್ಲಿ ತಂಗಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಘಟನೆಯ ದಿನವೂ ಬಿಎಂ ರಸ್ತೆಯಲ್ಲಿರುವ ಖಾಸಗಿ ಲಾಡ್ಜನ ಕೊಠಡಿಯಲ್ಲಿ ಒಬ್ಬರೇ ಇದ್ದರೆಂದು ಹೇಳಲಾಗಿದೆ. ಬೆಳಗ್ಗೆ ಸಾಕಷ್ಟು ಸಮಯ ಕಳೆದರೂ ಕೊಠಡಿ ಬಾಗಿಲು ತೆರೆಯದಿರುವುದು ಹಾಗೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆ ಲಾಡ್ಜ್ ಸಿಬ್ಬಂದಿಗೆ ಅನುಮಾನ ಉಂಟಾಗಿದೆ. ಬಳಿಕ ಪರಿಶೀಲನೆ ನಡೆಸಿದಾಗ ತಿಮ್ಮಯ್ಯ ಅವರು ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಆಡಳಿತ ವಲಯವನ್ನು ಬೆಚ್ಚಿ ಬೀಳಿಸಿರುವ ಘಟನೆಯೊಂದರಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮ್ಮಯ್ಯ (52) ಅವರು ಹಾಸನ ನಗರದ ಬಿಎಂ ರಸ್ತೆಯಲ್ಲಿರುವ ಖಾಸಗಿ ಲಾಡ್ಜಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಘಟನಾ ಸ್ಥಳದಲ್ಲಿ ನಾಲ್ಕು ಪುಟಗಳ ಡೆತ್‌ನೋಟ್ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮತ್ತು ಗಂಭೀರತೆ ತಂದಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ ಅವರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಹಿಂದೆ ಸುಮಾರು ಮೂರು ವರ್ಷಗಳ ಕಾಲ ಹಾಸನ ಜಿಲ್ಲೆಯಲ್ಲಿಯೂ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಸಾರ್ವಜನಿಕರು, ಸಹೋದ್ಯೋಗಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆಂದು ತಿಳಿದುಬಂದಿದೆ. ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ಸರಳ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದ ತಿಮ್ಮಯ್ಯ ಅವರ ಅಕಾಲಿಕ ನಿಧನ ಆಡಳಿತ ವಲಯದಲ್ಲಿ ಆಘಾತ ಉಂಟುಮಾಡಿದೆ.

ತಿಮ್ಮಯ್ಯ ಅವರು ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಲಾಡ್ಜಲ್ಲಿ ತಂಗಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಘಟನೆಯ ದಿನವೂ ಬಿಎಂ ರಸ್ತೆಯಲ್ಲಿರುವ ಖಾಸಗಿ ಲಾಡ್ಜನ ಕೊಠಡಿಯಲ್ಲಿ ಒಬ್ಬರೇ ಇದ್ದರೆಂದು ಹೇಳಲಾಗಿದೆ. ಬೆಳಗ್ಗೆ ಸಾಕಷ್ಟು ಸಮಯ ಕಳೆದರೂ ಕೊಠಡಿ ಬಾಗಿಲು ತೆರೆಯದಿರುವುದು ಹಾಗೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆ ಲಾಡ್ಜ್ ಸಿಬ್ಬಂದಿಗೆ ಅನುಮಾನ ಉಂಟಾಗಿದೆ. ಬಳಿಕ ಪರಿಶೀಲನೆ ನಡೆಸಿದಾಗ ತಿಮ್ಮಯ್ಯ ಅವರು ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಡೆತ್‌ನೋಟ್ ಪತ್ತೆ:

ಘಟನೆ ಕುರಿತು ತಕ್ಷಣವೇ ಬಡಾವಣೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಘಟನಾ ಸ್ಥಳದ ಮಹಜರು ನಡೆಸಿದ ವೇಳೆ ನಾಲ್ಕು ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿರುವ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಡೆತ್‌ನೋಟ್‌ನಲ್ಲಿ ಏನು ಉಲ್ಲೇಖಿಸಲಾಗಿದೆ ಎಂಬುದನ್ನು ತನಿಖೆಯ ಹಿತದೃಷ್ಟಿಯಿಂದ ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಪ್ರಾಥಮಿಕ ತನಿಖೆಯ ಪ್ರಕಾರ ಆತ್ಮಹತ್ಯೆಗೆ ವೈಯಕ್ತಿಕ, ಕುಟುಂಬ ಅಥವಾ ಇತರೆ ಯಾವ ಕಾರಣಗಳಿವೆಯೋ ಎಂಬ ಎಲ್ಲಾ ಆಯಾಮಗಳಲ್ಲೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತಿಮ್ಮಯ್ಯ ಅವರ ಮೊಬೈಲ್ ಫೋನ್, ದಾಖಲೆಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಡೆತ್‌ನೋಟ್‌ನಲ್ಲಿರುವ ಮಾಹಿತಿಯ ಆಧಾರದ ಮೇಲೂ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಆಪ್ತರು ಲಾಡ್ಜ್ ಗೆ ಆಗಮಿಸಿ ದುಃಖ ವ್ಯಕ್ತಪಡಿಸಿದರು. ತಿಮ್ಮಯ್ಯ ಅವರ ಪತ್ನಿ ಮತ್ತು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿದ್ದವರ ಮನಕಲಕುವಂತಿತ್ತು.

ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿ ಬಂದ ಬಳಿಕ ಸಾವಿನ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಪ್ರಕರಣವನ್ನು ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿರುವ ಪೊಲೀಸರು, ಆತ್ಮಹತ್ಯೆಯ ಹಿಂದಿನ ನಿಖರ ಕಾರಣಗಳು, ಡೆತ್‌ನೋಟ್‌ನಲ್ಲಿರುವ ಅಂಶಗಳು ಹಾಗೂ ಇತರೆ ಸಂಬಂಧಿತ ಮಾಹಿತಿಗಳ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬೀಳಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನ- ಸೋಲಾಪುರ ರೈಲು ನಿಲುಗಡೆಗೆ ಸಚಿವ ಸೋಮಣ್ಣ ಚಾಲನೆ
ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂದ ಶಾಸಕ ಬಾಲಕೃಷ್ಣ