ಸಚಿವ ಬಾಲಕೃಷ್ಣ ವಿರುದ್ಧ ಕೀಳುಮಟ್ಟದ ಟೀಕೆ: ಮಾಜಿ ಶಾಸಕ ಎ.ಮಂಜುನಾಥ್‌ಗೆ ಕಾಂಗ್ರೆಸ್ ಮುಖಂಡರ ಖಡಕ್ ಎಚ್ಚರಿಕೆ

KannadaprabhaNewsNetwork |  
Published : Sep 02, 2026, 02:45 AM IST
 ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

ತಮ್ಮ ೫ ವರ್ಷದ ಅವಧಿಯಲ್ಲಿ ₹೧,೫೦೦ ಕೋಟಿ ಅನುದಾನ ತಂದೆ ಎಂದು ಹೇಳಿಕೊಳ್ಳುವ ಮಾಜಿ ಶಾಸಕರು, ಅದರಲ್ಲಿ ತಮ್ಮ ಕಾರ್ಯಕರ್ತರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಬಹಿರಂಗಪಡಿಸಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿ ಪ್ರಚಾರ ಪಡೆಯುವ ಚಾಳಿಯನ್ನು ಎ.ಮಂಜು ಬಿಡಬೇಕು. ಕ್ಷೇತ್ರದ ಚುನಾವಣೆಯಲ್ಲಿ ಸೋಲು- ಗೆಲುವನ್ನು ತೀರ್ಮಾನಿಸಲು ಮತದಾರರು ಮತ್ತು ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರ ಬಗ್ಗೆಯಾಗಲಿ ಅಥವಾ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆಯಾಗಲಿ ಕೀಳುಮಟ್ಟದ ಹೇಳಿಕೆ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಮತ್ತು ಅದರಿಂದಾಗುವ ಅನಾಹುತಗಳಿಗೆ ನೀವೇ ನೇರ ಹೊಣೆ ಎಂದು ಕೃಷ್ಣಮೂರ್ತಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಕ್ಷೇತ್ರದ ಶಾಸಕರು ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ಅವರ ವಿರುದ್ಧ ವೈಯಕ್ತಿಕ ತೇಜೋವಧೆ ಹಾಗೂ ಕೀಳುಮಟ್ಟದ ಹೇಳಿಕೆ ನೀಡುತ್ತಿರುವ ಮಾಜಿ ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಎ.ಮಂಜುನಾಥ್‌ಗೆ ಬಹಿರಂಗ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿ, ರಾಜಕೀಯವಾಗಿ ಆರೋಗ್ಯಕರ ಚರ್ಚೆ ಅಥವಾ ಟೀಕೆ-ಟಿಪ್ಪಣಿಗಳನ್ನು ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಮಾಜಿ ಶಾಸಕರಾಗಿರುವವರು ತಮ್ಮ ಘನತೆ ಮರೆತು, ಸಚಿವರ ವಿರುದ್ಧ ವೈಯಕ್ತಿಕ ತೇಜೋವಧೆ ಹಾಗೂ ಸಂಸ್ಕಾರಹೀನ ಪದಗಳನ್ನು ಬಳಸುತ್ತಿರುವುದು ಖಂಡನೀಯ. ತಾಕತ್ತು, ಧಮ್ಮು ಎಂಬ ಪದಗಳನ್ನು ಬಿಟ್ಟು ಅವರಿಗೆ ಬೇರೇನೂ ಮಾತನಾಡಲು ಬರುತ್ತಿಲ್ಲ. ಸಚಿವ ಬಾಲಕೃಷ್ಣ ಅವರ ತಾಕತ್ತನ್ನು ಕ್ಷೇತ್ರದ ಜನತೆ ೫ ಬಾರಿ ಗೆಲ್ಲಿಸುವ ಮೂಲಕ ಈಗಾಗಲೇ ಸಾಬೀತುಪಡಿಸಿದ್ದಾರೆ. ಮಾಜಿ ಶಾಸಕರು ೫ ವರ್ಷ ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಅಧಿಕಾರವಾಗಲಿ, ಉದ್ಯೋಗವಾಗಲಿ ಕಲ್ಪಿಸಿಕೊಡದವರು ಇಂದು ಮಾತನಾಡುತ್ತಿದ್ದಾರೆ. ಆದರೆ ಸಚಿವ ಬಾಲಕೃಷ್ಣ ಅವರು ಕಾರ್ಯಕರ್ತರನ್ನು ಕಷ್ಟದ ಸಮಯದಲ್ಲಿ ಕೈಹಿಡಿದು ಬೆಳೆಸಿದ್ದಾರೆಂದು ಕೃಷ್ಣಮೂರ್ತಿ ತಿಳಿಸಿದರು.

ತಮ್ಮ ೫ ವರ್ಷದ ಅವಧಿಯಲ್ಲಿ ₹೧,೫೦೦ ಕೋಟಿ ಅನುದಾನ ತಂದೆ ಎಂದು ಹೇಳಿಕೊಳ್ಳುವ ಮಾಜಿ ಶಾಸಕರು, ಅದರಲ್ಲಿ ತಮ್ಮ ಕಾರ್ಯಕರ್ತರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಬಹಿರಂಗಪಡಿಸಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿಸಿ ಪ್ರಚಾರ ಪಡೆಯುವ ಚಾಳಿಯನ್ನು ಎ.ಮಂಜು ಬಿಡಬೇಕು. ಕ್ಷೇತ್ರದ ಚುನಾವಣೆಯಲ್ಲಿ ಸೋಲು- ಗೆಲುವನ್ನು ತೀರ್ಮಾನಿಸಲು ಮತದಾರರು ಮತ್ತು ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರ ಬಗ್ಗೆಯಾಗಲಿ ಅಥವಾ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆಯಾಗಲಿ ಕೀಳುಮಟ್ಟದ ಹೇಳಿಕೆ ನೀಡಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಮತ್ತು ಅದರಿಂದಾಗುವ ಅನಾಹುತಗಳಿಗೆ ನೀವೇ ನೇರ ಹೊಣೆ ಎಂದು ಕೃಷ್ಣಮೂರ್ತಿ ಎಚ್ಚರಿಸಿದರು.

ಪಂಚ ಗ್ಯಾರಂಟಿಗಳ ಮಾಜಿ ಅಧ್ಯಕ್ಷ ಕಲ್ಕೆರೆ ಶಿವಣ್ಣ ಮಾತನಾಡಿ, ಐದು ಬಾರಿ ಶಾಸಕರಾಗಿ ಜನರ ಪ್ರೀತಿ ಗಳಿಸಿರುವ ಬಾಲಕೃಷ್ಣ ಅವರ ಶಕ್ತಿ ಮತ್ತು ಜನಬಲವನ್ನು ಸಹಿಸಿಕೊಳ್ಳಲು ಮಂಜುನಾಥ್ ಅವರಿಗೆ ಸಾಧ್ಯವಾಗುತ್ತಿಲ್ಲ, ರಾಜಕೀಯವಾಗಿ ನೆಲೆ ಕಲ್ಪಿಸಿದ ಪಕ್ಷ ಹಾಗೂ ಮುಖಂಡರಿಗೆ ದ್ರೋಹ ಬಗೆದಿರುವ ಇತಿಹಾಸ ಮಂಜುನಾಥ್ ಅವರದ್ದು. ಜೆಡಿಎಸ್, ಕಾಂಗ್ರೆಸ್ ಎನ್ನದೆ ಸ್ವಂತ ಲಾಭಕ್ಕಾಗಿ ಪಕ್ಷ ಬದಲಾಯಿಸಿ, ಜೊತೆಗಿದ್ದ ಕಾರ್ಯಕರ್ತರನ್ನೇ ನಡುನೀರಿನಲ್ಲಿ ಕೈಬಿಟ್ಟಿದ್ದಾರೆ ಎಂದು ಶಿವಣ್ಣ ಆರೋಪಿಸಿದರು.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಉಪಚುನಾವಣೆ ಸಂದರ್ಭದಲ್ಲಿ ಬಾಲಕೃಷ್ಣ ಹಾಗೂ ಅವರ ಕಾರ್ಯಕರ್ತರು ನಿಷ್ಠೆಯಿಂದ ಶ್ರಮಿಸಿ ಗೆಲುವಿಗೆ ಕಾರಣರಾಗಿದ್ದನ್ನು ಮಾಜಿ ಶಾಸಕರು ಮರೆಯಬಾರದು, ಎಚ್.ಸಿ.ಬಾಲಕೃಷ್ಣ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಿಸಬೇಕು, ಪದೇಪದೇ ಇಲ್ಲಸಲ್ಲದ ಆರೋಪಗಳನ್ನು ಸಚಿವರ ವಿರುದ್ಧ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ತಕ್ಕ ರಾಜಕೀಯ ಪಾಠ ಕಲಿಸಬೇಕಾಗುತ್ತದೆ ಎಂದು ಕಲ್ಕೆರೆ ಶಿವಣ್ಣ ಖಡಕ್ ಎಚ್ಚರಿಕೆ ನೀಡಿ, ಕ್ಷೇತ್ರದ ಅಭಿವೃದ್ಧಿ ಮತ್ತು ಶಾಂತಿಯನ್ನು ಕದಡುವ ದುರುದ್ದೇಶದಿಂದ ಮಾಜಿ ಶಾಸಕರು ಸುಳ್ಳು ಆರೋಪಗಳಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪಂಚ ಗ್ಯಾರಂಟಿಗಳ ತಾಲೂಕು ಅಧ್ಯಕ್ಷ ಬೆಳ್ಳಿಯಪ್ಪ, ಎಂಡಿಎ ಅಧ್ಯಕ್ಷ ಪ್ರಕಾಶ್, ಕಿರಣ್‌ಗೌಡ, ಗೋಪಾಲ್ ಮಾತನಾಡಿದರು, ಕಾಂಗ್ರೆಸ್ ಮುಖಂಡರಾದ ರಿಯಾಜ್‌ಆಹಮದ್, ರೂಪೇಶ್‌ಕುಮಾರ್, ಅಶ್ವತ್ಥ್, ಗುರುಸ್ವಾಮಿ, ದೊಡ್ಡಸೋಮನಹಳ್ಳಿ ಪಾಪಣ್ಣಗೌಡ, ಕೇಬಲ್ ಮಂಜುನಾಥ್, ಪರ್ವಿಜ್‌ನಯಾಜ್, ಫೈರೋಜ್, ಚಿಕ್ಕರಾಜು, ಆಗ್ರೋ ಪುರುಷೋತ್ತಮ್, ಕೃಷ್ಣಪ್ಪ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯಕ್ಕೆ ಪ್ರವೇಶ: ಚೇತನ್ ಅಹಿಂಸಾ
ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತ ಬೇಡ: ಶ್ರೀಶಿವಬಸವ ಸ್ವಾಮೀಜಿ