ಕನ್ನಡಪ್ರಭ ವಾರ್ತೆ ಹಾಸನ
ದೇಸಾಯಿಯವರ ಮನೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಸಾಹಿತಿಗಳು ಲೇಖಕರು ಗೊರೂರು ಅನಂತರಾಜುರವರು ಮಾತನಾಡಿ ಸಂಘಟನೆಯು ಸಾಧಕರನ್ನು ಪ್ರೋತ್ಸಾಹಿಸಿ ಗೌರವಿಸುವ ಮೂಲಕ ವಿಶಿಷ್ಟವಾದ ಕಾರ್ಯವನ್ನು ಮಾಡಿದೆ. ಬಿ. ಎಸ್. ದೇಸಾಯಿಯವರು ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿ ಅವರಿಗೆ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿರವುದು ನಮ್ಮೆ ಲ್ಲರಿಗೂ ಸಂತಸ ತಂದಿದೆ ಎಂದರು. ಗೌರವ ಸ್ವೀಕರಿಸಿ ದೇಸಾಯಿಯವರು ಮಾತನಾಡಿ ಚಿತ್ರಕಲಾ ಜಗತ್ತಿನಲ್ಲಿ ಕಳೆದ ಮೂವತ್ತಾರು ವರ್ಷಗಳಿಂದ ತಾವು ಸೇವೆ ಸಲ್ಲಿಸುತ್ತಿದ್ದು, ಈ ಸೇವೆಯು ನಮಗೆ ತೃಪ್ತಿ ನೀಡಿದೆ. ಪ್ರಕೃತಿಯ, ಸಮಾಜದ ಮತ್ತು ಯೋಗದ ಮಹತ್ವದ ಕುರಿತು ಅಂತರಂಗ ಮತ್ತು ಬಹಿರಂಗಗಳನ್ನು ಬಿಂಬಿಸುವ ಅಮೂರ್ತ ಪರಿಕಲ್ಪನೆಯನ್ನು ಮೂರ್ತ ಸ್ವರೂಪದ ಸಂದೇಶಗಳಾಗಿ ಜಗತ್ತಿಗೆ ನೀಡಬೇಕಿದೆ. ಹಾಸನ ಜಿಲ್ಲಾ ಕೇಂದ್ರದಲ್ಲಿ ಒಂದು ಸುಂದರವಾದ ಆರ್ಟ್ ಗ್ಯಾಲರಿ ಪ್ರಾರಂಭವಾಗಬೇಕು. ಜಗತ್ತಿನ ಶ್ರೇಷ್ಠ ಚಿತ್ರಗಳು ಅಲ್ಲಿ ಪ್ರದರ್ಶಿತವಾಗಬೇಕು. ಅಲ್ಲದೇ ಸ್ಥಳೀಯ ಚಿತ್ರಕಲಾವಿದರ ಮತ್ತು ಚಿತ್ರಕಲಾ ಶಿಕ್ಷಕರಿಗೆ ಪ್ರೋತ್ಸಾಹ ಸಿಗುವಂತೆ ಆಗಬೇಕೆಂದು ಆಶಿಸಿದರು.
ಕದಂಬ ಸೈನ್ಯ ಕನ್ನಡ ಸಂಘಟನೆಯ ಹಾಸನ ಜಿಲ್ಲಾಧ್ಯಕ್ಷರಾದ ಎಚ್. ಎ. ಗಣೇಶ್ ಅಂಕಪುರ ಅವರು ಮಾತನಾಡಿ ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ. ದೇಸಾಯಿಯವರ ಮನೆಯೇ ಒಂದು ಆರ್ಟ್ ಗ್ಯಾಲರಿಯಂತಿದ್ದು ಇವರ ಚಿತ್ರಗಳು ಮೂರ್ತ ರೂಪದಲ್ಲಿದ್ದರೂ ಆಮೂರ್ತ ಪರಿಕಲ್ಪನೆಗಳನ್ನು ಹೊರಹೊಮ್ಮಿಸುತ್ತದೆ. ಅದನ್ನು ಗ್ರಹಿಸುವಲ್ಲಿ ನೋಡುಗರ ಅಂತರಂಗ ಕಾರ್ಯ ನಿರ್ವಹಿಸಬೇಕು ಎಂದರು. ಶಿಕ್ಷಕರಾದ ಕೆ. ಎನ್. ಚಿದಾನಂದ, ಸಾಹಿತಿ ಮತ್ತು ಉದ್ಯಮಿಗಳಾದ ವಿಶ್ವಾಸ್ ಡಿ. ಗೌಡ, ಕುಮಾರ್ ಅಂಕಪುರ ಮತ್ತು ಜೆ. ಆರ್. ಶ್ರೀಕಾಂತ್ ಅವರು ದೇಸಾಯಿಯವರಿಗೆ ಅಭಿನಂದಿಸಿದರು.