ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ ವಸೂಲಾತಿಯ ಬಗ್ಗೆ ಇಲಾಖೆ ವೆಬ್‌ಸೈಟ್‌ನಲ್ಲಿ ನೀಡಲಾದ ಅಂಕಿಅಂಶ.
ಎನ್.ವಿಶ್ವನಾಥ್ ಶ್ರೀರಾಂಪುರ
ಕನ್ನಡಪ್ರಭ ವಾರ್ತೆ ಹೊಸದುರ್ಗಗ್ರಾಮ ಪಂಚಾಯಿತಿಗಳಲ್ಲಿ ಶೇ.91ರಷ್ಟು ಕರ ವಸೂಲಿಯಾದರೂ ಮೂಲಭೂತ ಸೌಕರ್ಯಗಳಿಗಿಲ್ಲ ಹಣ. ಹಲವು ಗ್ರಾಮಗಳಲ್ಲಿ ಬೀದಿ ದೀಪಗಳಿಲ್ಲ, ಚರಂಡಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ರಸ್ತೆಗಳು ಹದಗೆಟ್ಟಿದ್ದರೂ ದುರಸ್ತಿ ಇಲ್ಲ ಹಾಗಾದಾರೆ ಶೇ.91ರಷ್ಟು ವಸೂಲಿಯಾದ ಹಣ ಎಲ್ಲಿಗೆ ಹೋಯಿತು ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿನ ಕಂದಾಯ ವಸೂಲಾತಿಯಲ್ಲಿ ಶೇ.91ರಷ್ಟು ವಸೂಲಿ ಸಾಧನೆ ಮಾಡಿದೆ ಎಂದು ಪಿಡಿಒಗಳು ತಮ್ಮ ವಾಟ್ಸ್‌ಆಪ್ ಸ್ಟೇಟಸ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಆದರೆ ಅಂಕಿಅಂಶಗಳನ್ನು ಗಮನಿಸಿದರೆ ವಾಸ್ತವ ಚಿತ್ರ ಬೇರೆಯೇ ಇದೆ. ಕಳೆದ ಸಾಲಿನ ಕಂದಾಯ ಬಾಕಿ 15.12 ಕೋಟಿ ರು. ಹಾಗೂ ಪ್ರಸಕ್ತ ಸಾಲಿನ ಬೇಡಿಕೆ 5.05 ಕೋಟಿ ಸೇರಿ ಒಟ್ಟು 20.18 ಕೋಟಿ ರು.ಗೂ ಹೆಚ್ಚು ತೆರಿಗೆ ವಸೂಲಿಯಾಗಬೇಕಿದೆ. ಇದರಲ್ಲಿ ಕೇವಲ 4.61 ಕೋಟಿ ರು. ಮಾತ್ರ ವಸೂಲಾಗಿದ್ದು, ಇನ್ನೂ 15 ಕೋಟಿ ರು.ಗೂ ಹೆಚ್ಚು ಬಾಕಿ ಉಳಿದಿದೆ.
*ಬಾಕಿ ಕಂದಾಯ ಮನ್ನಾ ಮಾಡ್ತಾರ: ಅಧಿಕಾರಿಗಳ ಪ್ರಕಾರ ಪ್ರಸಕ್ತ ಸಾಲಿನ ಕಂದಾಯ ಬೇಡಿಕೆಯಲ್ಲಿ ಶೇ.91 ರಷ್ಟು ಕಂದಾಯ ವಸೂಲಿಯಾದರೆ ಬಾಕಿ ಇರುವ ಕಂದಾಯದ ಹಣ ಲೆಕ್ಕಕ್ಕಿಲ್ಲವೆ ಹಾಗಾದರೆ ಅದನ್ನು ಮನ್ನಾ ಮಾಡ್ತಾರ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೆ 20.18 ಕೋಟಿ ರು. ಕಂದಾಯ ಬರಬೇಕು ಅದರಲ್ಲಿ ವಸೂಲಿಯಾಗಿರುವುದೇ ಕೇವಲ 4.61 ಕೋಟಿ ರು. ಈಗಿರುವಾಗ ಶೇ.91ರಷ್ಟು ವಸೂಲಿ ಹೇಗಾಗುತ್ತದೆ ಎನ್ನುವ ಪ್ರಶ್ನೆಯನ್ನು ಜನರು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅಧಿಕಾರಿಗಳು ತಪ್ಪು ಸಂದೇಶ ರವಾನಿಸಿದಂತಾಗಿದೆ.
*ಹಣ ದುರ್ಬಳಕೆ ಆರೋಪ: ಗ್ರಾಮೀಣ ಜನತೆಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸಶಕ್ತವಾಗಿರಬೇಕು. ಈ ನಿಟ್ಟಿನಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಕಂದಾಯ ವಸೂಲಾತಿ ಅಭಿಯಾನ ಕೈಗೊಂಡಿದ್ದು, ಸಿಬ್ಬಂದಿಗಳ ಮೂಲಕ ಮಾರ್ಚ್ ನಲ್ಲಿ ವಸೂಲಾತಿ ಕಾರ್ಯ ನಡೆಸಲಾಗಿದೆ. ಗ್ರಾಮೀಣ ಜನತೆಗೆ ಗುಣಮಟ್ಟದ ಮೂಲ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಿದ್ದರೆ ಜನರು ತೆರಿಗೆ ಪಾವತಿಗೆ ಮುಂದಾಗುತ್ತಿದ್ದರು. ಆದರೆ ಜನರಿಂದ ಸಂಗ್ರಹವಾಗುವ ತೆರಿಗೆ ಹಣದ ಸದ್ಬಳಕೆ ಬದಲು ಕೆಲ ಅಧಿಕಾರಿಗಳಿಂದ ದುರ್ಬಳಕೆ ಆಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ಆರೋಪಿಸಿದ್ದಾರೆ.
ಗ್ರಾಪಂಗಳಿಗೆ ಜನರಿಂದ ವಸೂಲಿಯಾಗುವ ತೆರಿಗೆ ಜೊತೆಗೆ ಕೇಂದ್ರದ 15ನೇ ಹಣಕಾಸು ಆಯೋಗ ಹಾಗೂ ರಾಜ್ಯ ಹಣಕಾಸು ಅನುದಾನಗಳಿಂದ ವರ್ಷಕ್ಕೆ ಕೋಟಿಗೂ ಹೆಚ್ಚು ಹಣ ಬರುತ್ತದೆ. ಆದರೂ ಕುಡಿಯುವ ನೀರು, ನೈರ್ಮಲೀಕರಣ, ಬೀದಿ ದೀಪ, ರಸ್ತೆ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಮೂಲಭೂತ ಸೌಲಭ್ಯಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಬಾಕ್ಸ:
ನಿಯಮ ಮೀರಿ ಅನುದಾನ ಬಳಕೆ: ತನಿಖೆಗೆ ಆಗ್ರಹ:
ತಾಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯ ಅನುದಾನವನ್ನು ನಿಯಮ ಮೀರಿ ಬಳಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಕೆಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹಾಗೂ ಅಧ್ಯಕ್ಷರ ವಿರುದ್ಧ ಹಣ ದುರ್ಬಳಕೆ ಆರೋಪಗಳೂ ಕೇಳಿಬರುತ್ತಿವೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಸ್ತುತ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತಾಧಿಕಾರಿಗಳ ಆಡಳಿತವಿದ್ದು, ಜನರಿಂದ ಸಂಗ್ರಹವಾಗುವ ತೆರಿಗೆ ಹಣ ಎಷ್ಟರ ಮಟ್ಟಿಗೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎಂಬುದು ಕಾದು ನೋಡಬೇಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.