ಮುಂಡರಗಿ: ರಾಜ್ಯದಲ್ಲಿ ಭೀಕರ ಬರಗಾರವಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಜತೆಗೆ ಹೊಟ್ಟು, ಮೇವು ಇಲ್ಲ. ಆದಾಗ್ಯೂ ಸಹ ರಾಜ್ಯದಲ್ಲಿ ಅಧಿಕಾರಿ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಎಸಿ ಕೊಠಡಿಯಲ್ಲಿ ಕುಳಿತು ಸಭೆ ನಡೆಸುತ್ತಿದೆಯೇ ಹೊರತು ಇದುವರೆಗೂ ಒಂದು ಬೋರ್ ವೆಲ್ ಕೊರೆಸಿ ಜನತೆಗೆ ನೀರು ಕೊಡುತ್ತಿಲ್ಲ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳಾದರೂ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ರೈತರ ಬಗ್ಗೆ ಕಾಳಜಿ ಇಲ್ಲ. ಈ ಭಾಗದ ಮಹತ್ತರವಾದ ಯೋಜನೆ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಇದ್ದಾಗ ಹೆಚ್ಚಿನ ಹಣ ನೀಡಲಾಗಿತ್ತು. ಇದೀಗ ಅದಕ್ಕಾಗಿ ಏನೂ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಹಾಗೂ ಕೂಲಿಕಾರ್ಮಿಕರ ಮಕ್ಕಳಿಗಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ. ರೈತರಿಗೆ ಅನುಕೂಲವಾಗುವ ಯಶಸ್ವಿನಿ ಯೋಜನೆ ಸಹ ಸ್ಥಗಿತಗೊಳಿಸಲಾಗಿದೆ. ಬಜೆಟ್ ನಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗೆ ತೆಗೆದಿರಿಸಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಡಾ. ಚಂದ್ರು ಲಮಾಣಿಯವರಿಗೆ ಹೆಚ್ಚಿನ ಮತ ನೀಡಿ ಆರಿಸಿ ತಂದಿದ್ದೀರಿ. ಇದೀಗ ನನಗೂ ಅದೇ ರೀತಿ ಹೆಚ್ಚಿನ ಮತಗಳನ್ನು ನೀಡಿ ಆರಿಸಿ ತಂದರೆ ನಾನು ಕೇವಲ ಲೋಕಸಭೆ ಸದಸ್ಯನಾಗಿ ಮಾತ್ರವಲ್ಲ, ಡಾ.ಚಂದ್ರು ಲಮಾಣಿ ನಾನು ಸೇರಿ ಈ ಕ್ಷೇತ್ರದ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಿ ಇದನ್ನೊಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದರು.
ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ದ. ಹೀಗಾಗಿ ಎಲ್ಲರೂ ಹಾವೇರಿ ಕ್ಷೇತ್ರದ ನಮ್ಮ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಹೆಚ್ಚಿನ ಮತ ಹಾಕುವ ಮೂಲಕ ಅವರನ್ನು ಆರಿಸಿ ತಂದು ನರೇಂದ್ರ ಮೋದಿಯವರ ಕೈ ಬಲಪಡಿಸೋಣ ಎಂದರು.ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಬಾಗೇವಾಡಿ, ಬೀಡನಾಳ ಹಾಗೂ ಹಮ್ಮಿಗಿ ಗ್ರಾಪಂ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ಜರುಗಿತು.