ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಹಿಳೆ ಎಂದರೆ ಕೇವಲ ಶಕ್ತಿ ಮಾತ್ರವಲ್ಲ ಅವರಿಗೆ ಶಿಕ್ಷಣದಿಂದ ದೊಡ್ಡ ಶಕ್ತಿ ಸಿಕ್ಕರೆ ಆಕೆಯ ಸಾಧನೆಗೆ ಬರವೆ ಬರಲ್ಲ. ಈ ಹಿನ್ನೆಲೆಯಲ್ಲಿ ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವಂತೆ ಮಾಡಬೇಕು ಎಂದು ಸೂರು ವಿಶ್ವ ವಿದ್ಯಾನಿಲಯದ ಜೆನಿಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಸುತ್ತೂರು ಎಸ್.ಮಾಲಿನಿ ಹೇಳಿದರು.ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚಿಗೆ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಹೊಲುವಂತೆ ಮಹಿಳೆಯರು ಭಾರತೀಯ ಸಂಸ್ಕೃತಿ ಮರೆಯುತ್ತಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲುತಿದ್ದಾರೆ. ಮನೆಯ ಮಕ್ಕಳ ಸರಿದಾರಿ ನಡೆಸಲು ಮಹಿಳೆಯ ಪಾತ್ರ ಮುಖ್ಯವಾಗಿದೆ, ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕೆಲಸ ಮಹಿಳೆಯರ ಆದ್ಯ ಕರ್ತವ್ಯವೂ ಹೌದು, ಹಾಗಾಗಿ ಜಗ್ಗತ್ತಿನ ಪ್ರತಿಯೊಬ್ಬ ಮಹಿಳೆಗೆ ಶಿಕ್ಷಣ ಎಂಬ ಆಯುಧ ಸಿಗಬೇಕು, ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಪರಿಪೂರ್ಣ ಶಿಕ್ಷಣ ದೊರೆತಾಗ ಮಾತ್ರ ಮಹಿಳೆ ಧೀಮಂತ ಶಕ್ತಿಯಾಗಬಲ್ಲರು ಎಂದರು. ಆಹಾರ ಪದ್ಧತಿ ಬದಲಾವಣೆಗೊಂಡು ಕ್ಯಾನ್ಸರ್, ಸಕ್ಕರೆ ಖಾಯಿಲೆ, ರಕ್ತದ ಒತ್ತಡ ಹೀಗೆ ಹಲವು ಮಾರಕ ಖಾಯಿಲೆ ಆವರಿಸುತ್ತಿದೆ. ಒತ್ತಡ ರಹಿತ ಬದುಕು ಸಿಗದೆ ಹೀಗಾಗುತ್ತಿದೆ, ಹಾಗಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಮಹಿಳೆಯರು ಹೆಚ್ಚು ಒತ್ತು ನೀಡಬೇಕು. ಹೊಟೇಲ್, ಜಂಕ್ ಫುಡ್ ತಿಂಡಿ, ಆಹಾರದಿಂದ ದೂರ ಇರಬೇಕು. ಮನೆಯಲ್ಲಿಯೇ ಆರೋಗ್ಯ ಭರಿತ ಸೊಪ್ಪು, ತರಕಾರಿ, ರಾಗಿ, ಜೋಳ ಖಾದ್ಯಗಳನ್ನು ತಯಾರಿಸಿಕೊಂಡು ಹೆಚ್ಚಾಗಿ ತಿನ್ನಬೇಕು ಎಂದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ರಾಜೇಂದ್ರ ಸ್ವಾಮಿಜೀಗಳು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರಾಗಿದ್ದಾರೆ. ಈ ವೇದಿಕೆ ಮೂಲಕ ಶರಣರ ವಚನಗಳು ಹಾಗೂ ಆಶಯಗಳನ್ನು ಇಡೀ ಜಗತ್ತಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ದತ್ತಿ ಕಾರ್ಯಕ್ರಮದ ಉದ್ದೇಶವಿಷ್ಟೆ ಶರಣ ವಚನಗಳ ಜಾಗೃತಿ ಮಾಡುವುದಾಗಿದೆ. ಹಾಗೆಯೇ ದತ್ತಿ ಕೊಟ್ಟವರು, ಅವರ ಹಿರಿಯರನ್ನು ಸ್ಮರಿಸಿಕೊಳ್ಳುವ ಕೆಲಸ ದತ್ತಿ ಉಪನ್ಯಾಸಗಳಿಂದ ಆಗುತ್ತಿದೆ ಎಂದರು.ತಾಲೂಕು ಅಧ್ಯಕ್ಷ ಎಸ್.ನಾಗರಾಜು, ಕದಳಿ ವೇದಿಕೆ ಅಧ್ಯಕ್ಷೆ ರೂಪ ತೋಟೇಶ್, ಕಾರ್ಯದರ್ಶಿ ಗೀತಾ ಮಂಜುನಾಥ್, ದತ್ತಿ ದಾನಿ ಕಾಳನಹುಂಡಿ ಗುರುಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್ ಇನ್ನಿತರಿದ್ದರು.