ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಸುದ್ದಿ ಗೋಷ್ಠಿಯುದ್ದಕ್ಕೂ ತಿಪ್ಪಾರೆಡ್ಡಿಯವರ ಏಕವಚನದಲ್ಲಿ ಸಂಬೋಧಿಸಿದ ಎಂ.ಚಂದ್ರಪ್ಪ, ನಾನು ಅಕ್ಕಿ, ಸೀಮೆಎಣ್ಣೆ ಮಾರಿ ಕಷ್ಟದಲ್ಲಿ ಬದುಕಿದ್ದೇನೆ. ನಿನ್ನ ಹಾಗೆ ಕರೆಂಟ್ ಕಳ್ಳತನ ಮಾಡಿಲ್ಲ. ನಾನು ಕಷ್ಟದಿಂದ ಬಂದ ವ್ಯಕ್ತಿ. ನನಗೆ ಬಡತನ ಏನೆಂದು ಗೊತ್ತಿದೆ. ನಿನ್ನಂತೆ ಬಂಗಾರದ ಚಮಚ ಇಟ್ಟುಕೊಂಡು ಬಂದವನಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಐದು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಎಷ್ಟೋ ಜನ ಬಡತನದಲ್ಲಿದ್ದವರು, ರಾಜಕೀಯಕ್ಕೆ ಬಂದು ದೊಡ್ಡವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿನಗೆ ಟಿಕೆಟ್ ಕೊಡದಿದ್ದರಿಂದ ಪಕ್ಷೇತರನಾಗಿ ನಿಂತು ಗೆದ್ದಿದ್ದಿಯಾ. ಅಲ್ಲಿಯೂ ಸಹ ನಿನ್ನ ಯೋಗ್ಯತೆ ಗೊತ್ತಾಗಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಕೊಡಲಿಲ್ಲ ಅನ್ನೋ ಕಾರಣಕ್ಕೆತಮ್ಮ ಹಿಂಬಾಲಕರಿಂದ ಟೈರ್ ಗೆ ಬೆಂಕಿ ಹಚ್ಚಿಸಿದ್ದನ್ನು ಮರೆತೆಯಾ? ಜಿಲ್ಲೆಯಲ್ಲಿ ನಾನು ಎಲ್ಲೆ ಹೋದರೂ ಇತರೆ ರಾಜಕೀಯ ಪಕ್ಷದವರು ಕರೆದು ಟಿಕೆಟ್ ನೀಡುತ್ತಾರೆ. ನಿನಗೆ ಆ ಯೋಗ್ಯತೆ ಇಲ್ಲ. ಕಳೆದ ಚುನಾವಣೆಯಲ್ಲಿ 90 ಸಾವಿರ ಮತದಾರರು ನಿನ್ನನ್ನು ತಿರಸ್ಕರಿಸಿದ್ದಾರೆ ಎಂದು ಏಕವಚನದಲ್ಲಿ ತಿಪ್ಪಾರೆಡ್ಡಿ ಮೇಲೆ ವಾಗ್ದಾಳಿ ಮಾಡಿದರು.ಶೌಚಾಲಯದಲ್ಲಿಯೂ ನನಗೊಂದು ರುಪಾಯಿ, ನಿನಗೊಂದು ರುಪಾಯಿ ಅಂತ ಗುತ್ತಿಗೆದಾರನಿಂದ ತಿಂದಿದ್ದೀಯ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರೋಪ ಮಾಡಿದ್ದು ಯಾರ ಮೇಲೆ ಅಂತ ನಿಂಗೆ ಗೊತ್ತಿರಬೇಕಲ್ಲವಾ? ಚಿತ್ರದುರ್ಗದಲ್ಲಿ ಡಿವೈಡರ್ ಕಟ್ಟಿ ಕಮಿಷನ್ ತಿಂದಿದ್ದೀಯ. ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ್ದಿ ಯಾ, ಈಗ ಆ ಡಿವೈಡರ್‌ಗಳನ್ನು ಅಧಿಕಾರಿಗಳೇ ಒಡೆಯುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಂದಿಗೂ ಇಂತಹ ಕಳಪೆ ಕಾಮಗಾರಿ ಮಾಡಿಲ್ಲೆವೆಂದರು.
ಪ್ರಜಾಪ್ರಭುತ್ವದಲ್ಲಿ ಯಾವುದೂ ದೊಡ್ಡದಿಲ್ಲ. ಯಾರು ಬೇಕಾದರೂ ಸ್ಪರ್ಧಿಬಹುದು, ಮತದಾರರು ನಿನ್ನ ಆಳುಗಳಲ್ಲ, ನಿನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸೋಲಿಸಿದ್ದಾರೆ. ನನ್ನ ನೋವನ್ನು ನನ್ನ ಅಭಿಮಾನಿಗಳ ಮುಂದೆ ತೋಡಿಕೊಂಡಿದ್ದೇನೆ. ಇದನ್ನು ಕೇಳುವ ಹಕ್ಕು ನಿನಗಿಲ್ಲವೆಂದರು.
ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮನೆಗೆ ಭೇಟಿ ಮಾಡಿದ್ದು, ಸಂಧಾನಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ ನಾವು ಯಾವುದಕ್ಕೂ ಬಗ್ಗಿಲ್ಲ. ನಮ್ಮ ಪಾಲಿನ ಹಕ್ಕನ್ನು ಕೇಳಿದ್ದೇವೆ. ಏಪ್ರಿಲ್ 3 ರಂದು ಪಕ್ಷೇತರರಾಗಿ ನನ್ನ ಪುತ್ರ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದಾನೆ. ಕ್ಷೇತ್ರವನ್ನು ಸುತ್ತಾಡಿರುವ ರಘುಚಂದನ್‍ಗೆ ಎಲ್ಲಾ ಸಮಾಜದವರು ಬೆಂಬಲವನ್ನು ಸೂಚಿಸಿದ್ದಾರೆ ಎಂದು ಚಂದ್ರಪ್ಪ ಹೇಳಿದರು.