ಕಾಡಾನೆಗಳ ದಾಳಿಗೆ ಜೋಳದ ಬೆಳೆ ನಾಶ

KannadaprabhaNewsNetwork |  
Published : Dec 05, 2025, 12:15 AM IST
4ಎಚ್ಎಸ್ಎನ್3ಎ : ಕಾಫಿ ಗಿಡಗಳನ್ನು ಹಾಳು ಮಾಡಿರುವ ಕಾಡಾನೆಗಳು. | Kannada Prabha

ಸಾರಾಂಶ

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಯಾವುದೇ ಅಡೆತಡೆ ಇಲ್ಲದೆ ರಾಜಾರೋಷವಾಗಿ ತಮಗಿಷ್ಟವಾದ ತೋಟ, ಹೊಲಗದ್ದೆಗಳಿಗೆ ನುಗ್ಗಿ ಸಂತೃಪ್ತಿಯಾಗಿ ತಿಂದು ತೇಗುತ್ತಿವೆ. ಇದೇ ರೀತಿ ಮಂಗಳವಾರ ತಡರಾತ್ರಿ 20 ಆನೆಗಳ ತಂಡ ನವಿಲಹಳ್ಳಿ ಸುತ್ತಮುತ್ತಲಿನ ಕಾಫಿ ತೋಟ ಮತ್ತು ಫಸಲಿಗೆ ಬಂದ ಮುಸುಕಿನ ಜೋಳದ ಹೊಲಕ್ಕೆ ನುಗ್ಗಿ ಮನ ಬಂದಂತೆ ತಿಂದು, ತುಳಿದು ಹೊಸಕಿ ಹಾಕಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳು ಕಣ್ಣು ಮುಂದೆಯೇ ಹಾಳಾಗುತ್ತಿದ್ದು ರೈತರು ಸರ್ಕಾರ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರುಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಕಾಫಿ ಮತ್ತು ಜೋಳದ ಬೆಳೆ ನಾಶವಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸುತ್ತಿದ್ದು ಬೆಳೆಗಾರರು ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಯಾವುದೇ ಅಡೆತಡೆ ಇಲ್ಲದೆ ರಾಜಾರೋಷವಾಗಿ ತಮಗಿಷ್ಟವಾದ ತೋಟ, ಹೊಲಗದ್ದೆಗಳಿಗೆ ನುಗ್ಗಿ ಸಂತೃಪ್ತಿಯಾಗಿ ತಿಂದು ತೇಗುತ್ತಿವೆ. ಇದೇ ರೀತಿ ಮಂಗಳವಾರ ತಡರಾತ್ರಿ 20 ಆನೆಗಳ ತಂಡ ನವಿಲಹಳ್ಳಿ ಸುತ್ತಮುತ್ತಲಿನ ಕಾಫಿ ತೋಟ ಮತ್ತು ಫಸಲಿಗೆ ಬಂದ ಮುಸುಕಿನ ಜೋಳದ ಹೊಲಕ್ಕೆ ನುಗ್ಗಿ ಮನ ಬಂದಂತೆ ತಿಂದು, ತುಳಿದು ಹೊಸಕಿ ಹಾಕಿದೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳು ಕಣ್ಣು ಮುಂದೆಯೇ ಹಾಳಾಗುತ್ತಿದ್ದು ರೈತರು ಸರ್ಕಾರ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಡಾನೆಗಳ ಹಿಂಡು ನವಿಲಹಳ್ಳಿ, ಮೈಲನಹಳ್ಳಿ ಸುತ್ತಾ ವಾಸ್ತವ್ಯ ಹೂಡಿ ಫಸಲಿಗೆ ಬಂದ ಬೆಳೆಯನ್ನು ಸರ್ವನಾಶ ಮಾಡುವ ಜೊತೆಗೆ ಗ್ರಾಮದೊಳಗೆ ನುಗ್ಗಿ ಮನೆಯ ಮುಂದೆ ಸರದಿ ಸಾಲಿನಲ್ಲಿ ಪೆರೇಡ್ ಮಾಡುತ್ತಾ ಸಾಗುತ್ತಿರುವುದು ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಕಾಡಾನೆಗಳ ದಾಳಿಗೆ ಬೆಳೆ ನಾಶವಾದರೆ ಬಿಡಿಗಾಸು ಪರಿಹಾರವನ್ನು ನೀಡಲಾಗುತ್ತಿದೆ. ಆನೆ ದಾಂಧಲೆಯಿಂದ ಲಕ್ಷಾಂತರ ರು. ಬೆಳೆ ನಾಶಗೊಂಡಿದ್ದರೆ ಅರಣ್ಯ ಇಲಾಖೆಯು ಐದೋ ಹತ್ತೋ ಸಾವಿರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಆನೆ ದಾಳಿಗೆ ಮನುಷ್ಯ ಮೃತ ಪಟ್ಟರೆ ಜೀವದ ಬೆಲೆ ಇಪ್ಪತ್ತು ಸಾವಿರ ಎಂದು ಸರ್ಕಾರ ನಿಗದಿ ಮಾಡಿದೆ. ಆದರೆ ಆನೆಗಳ ಸ್ಥಳಾಂತರಕ್ಕೆ ಯಾವುದೇ ಪರಿಹಾರ ಹುಡುಕುವಲ್ಲಿ ವಿಫಲವಾಗಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ‌ ತಾಲೂಕು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ವೆಂಕಟೇಶ್ ಮಾತನಾಡಿ, ಸರ್ಕಾರ ಕೇವಲ ಕುರ್ಚಿ ಕಾದಾಟದಿಂದ ರೈತಾಪಿಗಳನ್ನು ಮರೆತಿದ್ದಾರೆ. ಈಗಾಗಲೇ ಕಳೆದ ಮೂರು ವರ್ಷದಿಂದ ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದ್ದು ಅಪಾರ ಪ್ರಮಾಣದ ಬೆಳೆ‌ ನಷ್ಟ ಮತ್ತು ಹತ್ತಾರು ಜನರು ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಈ ಬಗ್ಗೆ ಹೋರಾಟ ನಡೆಸಿದ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಬಂದ‌ ಅರಣ್ಯ ‌ಸಚಿವರಾದ ಈಶ್ವರ ಖಂಡ್ರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಮಾಡಿಲ್ಲ, ಅವರಿಗೆ ಮಲೆನಾಡು ಭಾಗದ ಜನರು ಅನುಭವಿಸುವ ಕಷ್ಟದ ಬಗ್ಗೆ ಅರಿವಿಲ್ಲ ಎಂದರು.ತಾಪಂ ‌ಮಾಜಿ ಸದಸ್ಯ ಶಶಿಕುಮಾರ್‌ ಮಾತನಾಡಿ, ಕಳೆದ ರಾತ್ರಿ 20ಕ್ಕೂ ಅಧಿಕ ಕಾಡಾನೆಗಳು ನವಿಲಹಳ್ಳಿ‌ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಕಾಫಿ ತೋಟ ‌ಸರ್ವ ನಾಶ ಮಾಡಿವೆ. ಫಸಲಿಗೆ ಬಂದ ಕಾಫಿ, ಅಡಿಕೆ, ಬಾಳೆ, ಮೆಣಸು ‌ನೆಲ‌ಕಚ್ಚಿದೆ. ಇನ್ನೂ ಮುಸುಕಿನ ಜೋಳದ ಹೊಲಕ್ಕೆ ನುಗ್ಗಿ ಮನಬಂದಂತೆ ತಿಂದು ಚೆಲ್ಲಾಪಿಲ್ಲಿ ಮಾಡಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಮೊಬೈಲ್‌ನಲ್ಲಿ ಎಚ್ಚರಿಕೆ ನೀಡುವುದು ಬಿಟ್ಟರೆ ಇತ್ತ ತಲೆ ಹಾಕಿಲ್ಲ. ಕಾಡಾನೆಗಳ ಭಯದಿಂದ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಈಗ ಕಾಫಿ ಹಣ್ಣುಗಳನ್ನು ಕುಯ್ಯುವ ಕಾಲವಾಗಿದೆ. ಕಾರ್ಮಿಕರು ಒಲ್ಲದೆ ಹೇಗೆ ಕಟಾವು ಮಾಡುವುದು. ಮಲೆನಾಡು ಭಾಗದಲ್ಲಿ ಸಾವಿರಾರು ಕುಟುಂಬಗಳು ಕಾಫಿ ತೋಟವನ್ನು ನಂಬಿಕೊಂಡು ಕುಟುಂಬ ಸಾಗಿಸುತ್ತಿದ್ದು ದಿನ ನಿತ್ಯ ಭಯದಲ್ಲಿ ಜೀವನ ಸಾಗಿಸಬೇಕಾಗಿದೆ.

ಆನೆ ಕಾರಿಡಾರ್‌ ಮಾಡುವುದಾದರೆ ಶೀಘ್ರವೇ ಸ್ಥಾಪಿಸಿ ಸ್ಥಳಾಂತರ ಮಾಡಲಿ, ಇಲ್ಲವೇ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ ಇದೇ ಕಾರಣಕ್ಕಾಗಿ ಶೀಘ್ರವೇ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಕುಮಾರ್, ಸಂತೋಷ್, ರವಿ, ದಿನೇಶ್, ಪ್ರಸನ್ನ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ವೃಕ್ಷಥಾನ್ ಹೆರಿಟೇಜ್ ರನ್-2025
ಡಾ.ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯ ಮಾದರಿ