ಜೂ.೨೫ರಂದು ದೇವನಹಳ್ಳಿ ಚಲೋ: ಎ.ಎಲ್.ಕೆಂಪೂಗೌಡ

KannadaprabhaNewsNetwork |  
Published : Jun 22, 2025, 11:47 PM IST
೨೦ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿದರು. | Kannada Prabha

ಸಾರಾಂಶ

ಬಲವಂತದ ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಮುಂದಾಗಿವ ಸರ್ಕಾರದ ನಡೆ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘ ಸಂಘಟನೆಯಿಂದ ಜೂ.೨೫ ರಂದು ಬೆಂಗಳೂರಿನ ದೇವನಹಳ್ಳಿ ಚಲೋಗೆ ಕರೆ ನೀಡಲಾಗಿದ್ದು, ಮಂಡ್ಯ ಜಿಲ್ಲೆಯಿಂದ ೩೦೦ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಲವಂತದ ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲು ಮುಂದಾಗಿವ ಸರ್ಕಾರದ ನಡೆ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘ ಸಂಘಟನೆಯಿಂದ ಜೂ.೨೫ ರಂದು ಬೆಂಗಳೂರಿನ ದೇವನಹಳ್ಳಿ ಚಲೋಗೆ ಕರೆ ನೀಡಲಾಗಿದ್ದು, ಮಂಡ್ಯ ಜಿಲ್ಲೆಯಿಂದ ೩೦೦ಕ್ಕೂ ಹೆಚ್ಚು ಜನರು ಹೋರಾಟದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬಲವಂತ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನಕ್ಕೆ ರೈತರ ಪ್ರಬಲ ವಿರೋಧವಿದೆ. ಆದರೆ, ರಾಜ್ಯ ಸರ್ಕಾರದ ಹೇಡಿತನದ ಕೃತ್ಯವಾಗಿದೆ. ಒಟ್ಟು ೧೭೭೭ ಎಕರೆ ಭೂಸ್ವಾಧೀನದ ಅಧಿಸೂಚನೆ ರದ್ದುಪಡಿಸುವಂತೆ ಆಗ್ರಹಿಸಿ ದೇವನಹಳ್ಳಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ೧೧೮೦ ದಿನಗಳಿಂದ ಈ ಭಾಗದ ವ್ಯಾಪ್ತಿಯ ೧೩ ಗ್ರಾಮದ ರೈತರು ಮತ್ತು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಶೇ.೮೦ ರಷ್ಟು ರೈತರು ಲಿಖಿತವಾಗಿ ಭೂ ಸ್ವಾಧೀನಕ್ಕೆ ಅಸಮ್ಮತಿ ತೋರಿದ್ದಾರೆ. ಆದರೆ ಬಲವಂತದ ಭೂ ಸ್ವಾಧೀನಕ್ಕೆ ಕ್ರಮ ವಹಿಸಿರುವುದು ಅನ್ಯಾಯ, ಅಂದಿನ ವಿರೋಧ ಪಕ್ಷದಲ್ಲಿದ್ದ ಮುಖ್ಯಮಂತ್ರಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ನಾವು ಅಧಿಕಾರಕ್ಕೆ ಬಂದರೆ ಬಲವಂತದ ಸ್ವಾಧೀನ ರದ್ದುಪಡಿಸುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಕಿಡಿಕಾರಿದರು.

ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಅವರು ರೈತರಿಗೆ ಮಾತುಕೊಟ್ಟು ಅವರು ದ್ರೋಹ ಮಾಡಿದ್ದಾರೆ. ಇವರೆಲ್ಲರೂ ವಚನಭ್ರಷ್ಟರಾಗಿದ್ದಾರೆ. ತೀವ್ರ ವಿರೋಧ ಮಾಡಿದ್ದರ ಪರಿಣಾಮವಾಗಿ ಮುಖ್ಯಮಂತ್ರಿ ಅವರು ನಾಲ್ಕೈದು ಸಭೆ ನಡೆಸಿದ್ದರು. ಜೊತೆಗೆ ಉಸ್ತುವಾರಿ ಸಚಿವರು ಹತ್ತಾರು ಬಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಪರವಾಗಿ ತೀರ್ಮಾನ ಮಾಡುವುದಾಗಿ ಹೇಳಿ ಕೇವಲ ಚಪ್ಪಾಳೆ ಗಿಟ್ಟಿಸಿಕೊಂಡು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್ ಮಾತನಾಡಿ, ಚನ್ನರಾಯಪಟ್ಟಣ ಭಾಗದಲ್ಲಿ ರೈತರು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟಕ್ಕೆ ಬೆಂಬಲವಾಗಿದ್ದೇವೆ ಎನ್ನುವ ರಾಜ್ಯ ಸರ್ಕಾರವು ರೈತರಿಗೆ ಅನ್ಯಾಯ ಮಾಡುವ ಮೂಲಕ ಅಂತಿಮ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಲು ಹೊರಟಿದೆ. ಇದೆಲ್ಲವನ್ನು ಖಂಡಿಸಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.

ರೈತ ಸಂಘದ ಜಿ.ಎಸ್.ಲಿಂಗಪ್ಪಾಜಿ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕೂಲಿಕಾರರ ಸಂಘದ ಬಿ.ಹನುಮೇಶ್, ಜನವಾದಿ ಮಹಿಳಾ ಸಂಘನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಕೆ.ಲತಾ, ಮುಖಂಡರಾದ ಸತೀಶ್, ಅಣ್ಣಯ್ಯ, ಶಿವಮಲ್ಲಯ್ಯ ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ