ಜಿಲ್ಲಾ ದೇವಾಂಗ ಸಂಘದ ವತಿಯಿಂದ ಏಪ್ರಿಲ್ ೨೬ರಂದು ನೂತನ ಸಭಾಂಗಣ ಉದ್ಘಾಟನೆ ಹಾಗೂ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ ತಿಳಿಸಿದರು.
ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ: ವಿ.ಎ. ನಂಜುಂಡಸ್ವಾಮಿ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾ ದೇವಾಂಗ ಸಂಘದ ವತಿಯಿಂದ ಏಪ್ರಿಲ್ ೨೬ರಂದು ನೂತನ ಸಭಾಂಗಣ ಉದ್ಘಾಟನೆ ಹಾಗೂ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿರುವ ಶ್ರೀ ಬನಶಂಕರಿ ದೇವಾಂಗ ಸಂಘದಲ್ಲಿ ಭಾನುವಾರ ಬೆಳಗ್ಗೆ ೮.೩೦ಕ್ಕೆ ನೂತನ ಸಭಾಂಗಣ ಉದ್ಘಾಟನೆ ನಡೆಯಲಿದ್ದು, ಬೆಳಗ್ಗೆ ೯.೩೦ಕ್ಕೆ ದೇವಾಂಗ ಸಂಘದಿಂದ ಮೆರವಣಿಗೆ ಸಾಗಲಿದೆ ಎಂದರು. ಮೆರವಣಿಗೆಯಲ್ಲಿ ನೂರಾರು ಭಕ್ತರು, ಸಮಾಜದ ಮುಖಂಡರು ಹಾಗೂ ಮಹಿಳೆಯರು ಭಾಗವಹಿಸಲಿದ್ದು, ಸಾಂಪ್ರದಾಯಿಕ ವಾದ್ಯಗೋಷ್ಠಿ, ಧಾರ್ಮಿಕ ಘೋಷಣೆಗಳೊಂದಿಗೆ ವಿಶೇಷ ವೈಭವ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಬಳಿಕ ಶ್ರೀ ಬನಶಂಕರಿ ದೇವಾಂಗ ಸಂಘದ ಸಭಾಂಗಣದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ದೇವಾಂಗ ಜಗದ್ಗುರು ಹಂಪೆ ಹೇಮಕೂಟ ಗಾಯತ್ರಿ ಪೀಠದ ಶ್ರೀಶ್ರೀಶ್ರೀ ದಯಾನಂದಪುರಿ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಲಿದ್ದಾರೆ.
ರಾಜ್ಯಸಭಾ ಸದಸ್ಯ ಕೆ. ನಾರಾಯಣ್ ಅವರು ನೂತನ ಸಭಾಂಗಣವನ್ನು ಉದ್ಘಾಟಿಸಲಿದ್ದು, ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಮಾಜಿ ಶಾಸಕ ಪ್ರೀತಂ ಜೆ. ಗೌಡ ಸೇರಿ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ತಹಸೀಲ್ದಾರ್ ಗೀತಾ, ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಸೇರಿ ಹಲವು ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಜಿಲ್ಲಾ ಘಟಕಗಳ ಮುಖಂಡರು ಹಾಗೂ ಸಮಾಜದ ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಮಾಜದ ಏಕತೆ, ಧಾರ್ಮಿಕ ಪರಂಪರೆ ಮತ್ತು ಯುವಜನರಲ್ಲಿ ಸಮಾಜಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೇ ೮ ಮತ್ತು ೯ರಂದು ಬಾದಾಮಿ ಬನಶಂಕರಿಯಲ್ಲಿ ನಡೆಯಲಿರುವ ದೇವಾಂಗ ಜಾಗೃತಿ ಸಮಾವೇಶ ಹಾಗೂ ಶ್ರೀ ದಯಾನಂದಪುರಿ ಸ್ವಾಮೀಜಿಯವರ ೩೬ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವಕ್ಕೂ ಆಹ್ವಾನ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಆನಂದ್, ಪ್ರಕಾಶ್, ಶಿವರುದ್ರಪ್ಪ, ರಾಜಶೆಟ್ಟಿ, ಮನೋಹರ್, ಕೃಷ್ಣಶೆಟ್ಟಿ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.