ಯಲಬುರ್ಗಾ: ಪ್ರತಿಯೊಬ್ಬರೂ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ನಿವೃತ್ತ ಡಿಡಿಪಿಐ ಶಂಕ್ರಪ್ಪ ಗಾಂಜಿ ಹೇಳಿದರು.
ಎಲ್ಲರೂ ಮೊದಲು ಸರಳ ಜೀವನ ಶೈಲಿ ರೂಢಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಸಮಾನತೆ ಸ್ಥಾಪಿಸಲು ಶಿವಶರಣರು ವಚನ ಕ್ರಾಂತಿ ಮೂಲಕ ತಮ್ಮದೇ ಕೊಡುಗೆ ನೀಡಿದ್ದಾರೆ. ಅಂಥ ಮಹಾತ್ಮರ ಅದರ್ಶ ಪಾಲಿಸಬೇಕು ಎಂದರು.
ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆ ಜತೆಗೆ ಸಂಸ್ಕಾರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಎಲ್ಲ ಶರಣರು ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗ ಸ್ಫೂರ್ತಿದಾಯಕವಾಗಿವೆ ಎಂದರು.ನಿವೃತ್ತ ಪ್ರಾಚಾರ್ಯ ಕೆ.ಎಚ್.ಛತ್ರದ ಮಾತನಾಡಿ, ಬಸವ ಶಿವಯೋಗ ಸಮಿತಿಯವರು ವಿದ್ಯಾರ್ಥಿಗಳು, ಸಾಧಕರು, ನಿವೃತ್ತ ನೌಕರರನ್ನು ಗೌರವಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಎಲ್ಲರೂ ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಸಹಕಾರ ನೀಡಿದಾಗ ಪರೋಪಕಾರ ಮಾಡಲು ಸಾಧ್ಯವಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಶರಣ ವಚನಗಳ ಪಾಲನೆ ಮಾಡುವುದು ಕರ್ತವ್ಯವಾಗಬೇಕು ಎಂದರು.
ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ನಿವೃತ್ತ ನೌಕರರನ್ನು ಬಸವ ಸಮಿತಿಯಿಂದ ಸನ್ಮಾನಿಸಲಾಯಿತು.