ಪ್ರಸ್ತುತತೆಗೆ ತಕ್ಕಂತೆ ವೈಚಾರಿಕ‌ ಪ್ರಜ್ಞೆ ಬೆಳೆಸಿಕೊಳ್ಳಿ: ನಾಗರಾಜ

KannadaprabhaNewsNetwork |  
Published : Sep 30, 2025, 02:00 AM IST
ಪೋಟೊ: 29ಎಸ್‌ಎಂಜಿಕೆಪಿ01ಶಿವಮೊಗ್ಗದ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎ.ವಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ವರ್ತಮಾನದ ವೈಚಾರಿಕ ಪ್ರಜ್ಞೆ ವಿಚಾರ ಸಂಕಿರಣವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಕಾಲಿನ ಸಂದರ್ಭಕ್ಕೆ ಅನುಗುಣವಾಗಿ ಆಳವಾದ ಅಧ್ಯಯನದ ಮೂಲಕ ನಿಜವಾದ ವೈಜ್ಞಾನಿಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಕಾಲಿನ ಸಂದರ್ಭಕ್ಕೆ ಅನುಗುಣವಾಗಿ ಆಳವಾದ ಅಧ್ಯಯನದ ಮೂಲಕ ನಿಜವಾದ ವೈಜ್ಞಾನಿಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎ.ವಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ವರ್ತಮಾನದ ವೈಚಾರಿಕ ಪ್ರಜ್ಞೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ನಾವು ತಪ್ಪಿನ ವಿರುದ್ಧ ಹೋರಾಟ ಮಾಡಬೇಕಿದೆ ವಿನಃ ತಪ್ಪು ಮಾಡುವವರ ವಿರುದ್ಧ ಹೋರಾಟ ಮಾಡಬಾರದು. ಅಂಧ ಶ್ರದ್ಧೆ ಎಂಬುದು ನಮ್ಮನ್ನು ಎಂದಿಗೂ ಕಾಡಬಾರದು. ಮನುಷ್ಯನ ವಿಕಸನದ ಜೊತೆಗೆ ಮೌಡ್ಯತೆ ಎಂಬುದು ಬಂದಿದೆ. ಆವಿಷ್ಕಾರವೆಂಬ ಏಣಿಯ ತುತ್ತ ತುದಿಯಲ್ಲಿದ್ದರು, ಮನುಷ್ಯನಲ್ಲಿ ಭಯ ಎಂಬುದು ಹೋಗಿಲ್ಲ. ಭಯವೇ ಅಂಧಶ್ರದ್ದೆಯ ಮೂಲ ಕಾರಣ ಎಂದರು.

ಕಥೆಯ ಮೂಲಕ ಎಲ್ಲಾ ವೈಜ್ಞಾನಿಕ ಪ್ರತಿಪಾದನೆ ನಿರೂಪಿಸಲಾಗುತ್ತಿದೆ. ಕೆಲವು ಸಂಪ್ರದಾಯಗಳು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ‌. ಅದರೆ ಕಥೆ ಹೇಳುವಾಗ ವೈಜ್ಞಾನಿಕ ಸ್ಪಷ್ಟತೆಯಲ್ಲಿ ಹೇಳದೆ, ಭಯ ನಿರ್ಮಿಸುವಂತಹ ವಾದಗಳನ್ನು ಮಂಡಿಸಿದ್ದು ಇಂತಹ ಅಂಧ ಶ್ರದ್ಧೆಗಳು ಮೂಡಲು ಕಾರಣವಾಯಿತು ಎಂದು ಹೇಳಿದರು.

ಹಿರಿಯ ಸಾಹಿತಿ ಡಾ.ಎಚ್‌.ಟಿ.ಕೃಷ್ಣಮೂರ್ತಿ ಮಾತನಾಡಿ, ಪಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಸಾಕು, ಅದಕ್ಕಿಂತ ದೊಡ್ಡ ವೈಚಾರಿಕ ಚಿಂತನೆ ಮತ್ತೊಂದಿಲ್ಲ. ಅಂತಹ ವಿಸ್ಮಯತೆಯನ್ನು ಅರಿಯುವ ಬದಲಿಗೆ, ಮೌಡ್ಯಗಳು ನಮ್ಮನ್ನು ಆಳುವಂತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಇಂದು ವಿಶ್ವವಿದ್ಯಾಲಯ, ಪುಸ್ತಕಗಳು ನೀಡುವ ವಿಚಾರಗಳನ್ನು ನಂಬುವುದಕ್ಕಿಂತ, ವಾಟ್ಸ್ ಆ್ಯಪ್ ವಿವಿಯ ವಿಚಾರಗಳನ್ನು ಅತಿ ಹೆಚ್ಚು ನಂಬುತ್ತಿದ್ದೇವೆ.‌ ಉದ್ಯಾನದಲ್ಲಿ ಬೆಳೆಯಬೇಕಾದ ಮಕ್ಕಳು ಮನೆಯೆಂಬ ನಾಲ್ಕು ಗೋಡೆಯ ನಡುವೆ ಬೆಳೆಯುವಂತಾಗಿದೆ. ಉದ್ಯಾನಗಳಿಗೆ ಜಾಗ ನೀಡುವ ಬದಲಿಗೆ, ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಜಾಗ ನೀಡಲು ಪ್ರಾಧಾನ್ಯತೆ ನೀಡುತ್ತಿದ್ದೇವೆ. ದೈಹಿಕ ಶ್ರಮವಿಲ್ಲದೆ ಯುವ ಸಮೂಹ ನೂರಾರು ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ‌. ಮೌಡ್ಯ ಬಿತ್ತುವ ಬದಲಿಗೆ, ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಮ್ಮ ಪ್ರಾಧಾನ್ಯತೆ ಹೆಚ್ಚಾಗಬೇಕಿದೆ ಎಂದರು.

ಲಕ್ಷಾಂತರ ಪದವೀಧರರಾಗಿ ಹೊರಹೊಮ್ಮುತ್ತಿರುವ ಯುವ ಸಮೂಹ, ತಾವು ಪಡೆದ ವಿದ್ಯಾಭ್ಯಾಸಕ್ಕೆ ಸರಿಯಾದ ಉದ್ಯೋಗವಕಾಶ ಲಭಿಸದೆ, ತಮಗೆ ತೋಚಿದ ಉದ್ಯೋಗದಲ್ಲಿ ಸಂಪಾದನೆಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕೌಶಲ್ಯತೆಗಳ ಆಧಾರದಲ್ಲಿ ಶಿಕ್ಷಣದ ಬೋಧನಾ ಪ್ರಕ್ರಿಯೆ ನಡೆಯಬೇಕಿದೆ. ಸರಿಯಾದ ಉಪನ್ಯಾಸಕರಿಲ್ಲದೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಬೋಧನಾ ವ್ಯವಸ್ಥೆಯಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಭೂಮಂಡಲದಲ್ಲಿ ನಡೆಯುವ ಅದ್ಭುತ ಆವಿಷ್ಕಾರಗಳಲ್ಲಿ ಗ್ರಹಣ ಎಂಬ ವಿಸ್ಮಯವು ಒಂದು. ಗ್ರಹಣದ ವೈಜ್ಞಾನಿಕ ವಿಸ್ಮಯಗಳನ್ನು ಓದಿದ್ದೇವೆ, ಅದರೇ ಮೌಡ್ಯತೆಯ ಆಧಾರದಲ್ಲಿ ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.ಪಿ.ಆರ್.ಮಮತ, ಎನ್ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಕನ್ನಡ ಉಪನ್ಯಾಸಕರಾದ ಬಿ.ಎನ್.ಪ್ರವೀಣ್ ಮತ್ತಿತರರು ಹಾಜರಿದ್ದರು. ಉಪನ್ಯಾಸಕಿ ಗಾಯತ್ರಿ ನಿರೂಪಿಸಿ, ಗಾಯಕಿ ಸುಶೀಲಾ ಷಣ್ಮುಗಂ ಪ್ರಾರ್ಥಿಸಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ