ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗುಂಡ್ಲುಪೇಟೆ ತಾಲೂಕಿನ ತ್ರಿಯಂಭಕಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ಅವರು ನೈಸರ್ಗಿಕ ಕೃಷಿ ಯೋಜನೆ, ಕೃಷಿ ಕವಚ, ರಾಷ್ಟ್ರೀಯ ಖಾದ್ಯತೈಲ ಮಿಷನ್, ಪಿ.ಎಂ. ಕಿಸಾನ್ ಯೋಜನೆಗಳ ಬಗ್ಗೆ ತಿಳಿಸಿ ಮಣ್ಣು ಮತ್ತು ನೀರು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಅಲ್ಲದೇ ಇ-ಕೆ.ವೈ.ಸಿ ಪ್ರಾಮುಖ್ಯತೆ ಕುರಿತು ವಿವರಿಸಿದರು.
ವಿಜ್ಞಾನಿಗಳಾದ ಡಾ.ಗೋಪಿಕಾ ಮತ್ತು ಡಾ.ತಸ್ಮಿಯಾ ಇಮ್ತಿಯಾಜ್ ಅವರು ರೈತರಿಗೆ ಪಶುಸಂಗೋಪನೆಯ ಮಹತ್ವ ತಿಳಿಸಿ ಜಾನುವಾರುಗಳ ಸಮತೋಲನ ಪೋಷಣೆಯ ವಿವರಣೆಯನ್ನು ಪೋಷಣಾ ನಕ್ಷೆಯ ಮೂಲಕ ಸವಿವರವಾಗಿ ತಿಳಿಸಿಕೊಟ್ಟರು. ಕೇಂದ್ರದ ವಿಜ್ಞಾನಿ ಡಾ.ಶೃತಿ ಮಾತನಾಡಿ, ಸೂರ್ಯಕಾಂತಿ ಮತ್ತು ಮುಸುಕಿನ ಜೋಳದ ಸುಧಾರಿತ ಬೇಸಾಯ ಕ್ರಮಗಳು, ಮಣ್ಣು ಮತ್ತು ನೀರು ಪರೀಕ್ಷೆ, ಮಣ್ಣು ಸಂಗ್ರಹಣಾ ಪದ್ದತಿ ಮತ್ತು ಸೂರ್ಯಕಾಂತಿಯಲ್ಲಿ ಬರ‍್ಯಾಕ್ಸ್ ಲಘು ಪೋಷಕಾಂಶದ ಮಹತ್ವದ ಬಗ್ಗೆ ತಿಳಿಸಿದರು.ಕೊಟ್ಟಿಗೆ ಗೊಬ್ಬರ ಬಳಸದೇ ಮರಳು ಮಿಶ್ರಿತ ಹಗುರ ಮಣ್ಣಿನಲ್ಲಿ ಮುಸುಕಿನ ಜೋಳ ಬೆಳೆದಿರುವ ಸನ್ನಿವೇಶಗಳಲ್ಲಿ ಸತು ಪೋಷಕಾಂಶದ ಕೊರತೆಯಾಗುವುದು ಮತ್ತು ಅದನ್ನು ನಿರ್ವಹಿಸಲು ಸಲಹೆ ನೀಡಿದ ಪ್ರಮಾಣದ ಸತುವಿನ ಸಲ್ಫೇಟನ್ನು ನಿರ್ದಿಷ್ಟ ಬೆಳೆ ಬೆಳವಣಿಗೆ ಹಂತಗಳಲ್ಲಿ ಒದಗಿಸಬೇಕು ಎಂದು ಹೇಳಿದರು.
ಕೃಷಿ ಅಧಿಕಾರಿ ಮಹದೇವಪ್ರಸಾದ್ ಲಘು ನೀರಾವರಿ ಯೋಜನೆ, ಯಾಂತ್ರೀಕರಣ ಯೋಜನೆ, ಬಿತ್ತನೆ ಬೀಜ ಹಾಗೂ ಗೊಬ್ಬರಗಳ ದಾಸ್ತಾನು ಮತ್ತು ಲಭ್ಯತೆಯ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ರೈತರು-ವಿಜ್ಞಾನಿಗಳ ಚರ್ಚಾಗೊಷ್ಠಿ ನಡೆಸಿ ರೈತರ ಹಲವಾರು ಕ್ಷೇತ್ರ ಸಮಸ್ಯೆಗಳಿಗೆ ವಿಜ್ಞಾನಿಗಳು ಪರಿಹಾರ ತಿಳಿಸಿದರು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸೌಮ್ಯ, ಹಾಲು ಒಕ್ಕೂಟದ ಅಧ್ಯಕ್ಷರಾದ ಶಿವಕುಮಾರ್, ಪ್ರಗತಿಪರ ರೈತರಾದ ಪ್ರಭು, ಅಂದಾನಪ್ಪ, ಶಿವಪ್ರಸಾದ್, ಸ್ವಾಮಪ್ಪ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.