ದಾವಣಗೆರೆಯಲ್ಲಿ ಕಮಲ್ ಹಾಸನ್ ವಿರುದ್ಧ ಕರವೇ ಕೆಂಡ

KannadaprabhaNewsNetwork |  
Published : Jun 04, 2025, 12:17 AM IST
3ಕೆಡಿವಿಜಿ4-ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರದವರಿಗೆ ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಸಿನಿಮಾ ಥಗ್ ಲೈಫ್ ಪ್ರದರ್ಶನ ಮಾಡದಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. .................3ಕೆಡಿವಿಜಿ5-ದಾವಣಗೆರೆ ಗೀತಾಂಜಲಿ ಚಿತ್ರ ಮಂದಿರದವರಿಗೆ ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಸಿನಿಮಾ ಥಗ್ ಲೈಫ್ ಪ್ರದರ್ಶನ ಮಾಡದಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದನ್ನು ಖಂಡಿಸಿ ನಗರದ ಗೀತಾಂಜಲಿ ಚಿತ್ರಮಂದಿರ ಹಾಗೂ ಎಸ್ಸೆಸ್ ಮಾಲ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಮಲ್ ಹಾಸನ್ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿ, ಯಾವುದೇ ಕಾರಣಕ್ಕೂ ಸಿನಿಮಾ ಬಿಡುಗಡೆ ಮಾಡದಂತೆ ತಾಕೀತು ಮಾಡಿದರು.

ಗೀತಾಂಜಲಿ ಚಿತ್ರಮಂದಿರ, ಎಸ್ಸೆಸ್ ಮಾಲ್‌ಗೆ ಮುತ್ತಿಗೆ । ಕಮಲ್ ಹಾಸನ್ ಪೋಸ್ಟರ್ ಹರಿದು ಕಾರ್ಯಕರ್ತರ ಆಕ್ರೋಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ತಮಿಳು ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದನ್ನು ಖಂಡಿಸಿ ನಗರದ ಗೀತಾಂಜಲಿ ಚಿತ್ರಮಂದಿರ ಹಾಗೂ ಎಸ್ಸೆಸ್ ಮಾಲ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಮಲ್ ಹಾಸನ್ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿ, ಯಾವುದೇ ಕಾರಣಕ್ಕೂ ಸಿನಿಮಾ ಬಿಡುಗಡೆ ಮಾಡದಂತೆ ತಾಕೀತು ಮಾಡಿದರು.

ನಗರದ ಗೀತಾಂಜಲಿ ಚಿತ್ರ ಮಂದಿರ ಹಾಗೂ ಎಸ್ಸೆಸ್ ಮಾಲ್‌ನ ಮಲ್ಟಿಫ್ಲೆಕ್ಸ್‌ಗೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಇತರರ ನೇತೃತ್ವದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ತೆರಳಿ, ಕನ್ನಡ ಭಾಷಾ ವಿರೋಧಿಯಾದ ಕಮಲ್ ಹಾಸನ್ ಸಿನಿಮಾ ಥಗ್ ಲೈಫ್‌ನ್ನು ಯಾವುದೇ ಕಾರಣಕ್ಕೂ ನೀವು ಪ್ರದರ್ಶನ ಮಾಡಬಾರದು. ಒಂದು ವೇಳೆ ಆ ಸಿನಿಮಾ ಪ್ರದರ್ಶನಕ್ಕೆ ಮುಂದಾದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಎಂ.ಎಸ್.ರಾಮೇಗೌಡ, ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಮುಟ್ಟಾಳತನದ ಹೇಳಿಕೆ ನೀಡಿರುವ ಕಮಲ್ ಹಾಸನ್ ವಿರುದ್ಧ ರಾಜ್ಯವ್ಯಾಪಿ ಹೋರಾಟ ನಡೆಸಲಾಗುತ್ತಿದೆ. ಕಮಲ್ ಹಾಸನ್‌ ಸಮಸ್ತ ಕರ್ನಾಟಕ, ನಾಡಿನ ಸಮಸ್ತ ಕನ್ನಡಿಗರಿಗೆ ಬಹಿರಂಗ ಕ್ಷಮೆ ಕೇಳದ ಹೊರತು ಥಗ್ ಲೈಫ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಇಡೀ ರಾಜ್ಯವೇ ಒಕ್ಕೊರಲಿನಿಂದ ಹೇಳಿದೆ ಎಂದರು.

ಜೂ.5ರಂದು ಕಮಲ್ ಹಾಸನ್‌ರ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಮಾಡಿಕೊಂಡ ಸಿದ್ಧತೆಯನ್ನು ತಕ್ಷಣ ನಿಲ್ಲಿಸಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡ ಭಾಷೆಗಿಂತಲೂ ಇಲ್ಲಿ ಯಾವುದೂ ದೊಡ್ಡದಲ್ಲ, ಯಾರೂ ದೊಡ್ಡವರೂ ಅಲ್ಲ. ಕಮಲ್ ಹಾಸನ್‌ ವಿರುದ್ಧ ಯಾವುದೇ ಮುಲಾಜಿಲ್ಲದೇ ದಿಟ್ಟ ಕ್ರಮ ಕೈಗೊಂಡು, ಅವರ ಅಭಿನಯದ ಥಗ್ ಲೈಫ್ ಸಿನಿಮಾ ಪ್ರದರ್ಶನವನ್ನು ಇಡೀ ಕರ್ನಾಟಕದಲ್ಲೇ ರದ್ಧುಪಡಿಸಲಿ ಎಂದು ಆಗ್ರಹಿಸಿದರು.

ಇಡೀ ದಾವಣಗೆರೆಯ ಹೆಮ್ಮೆಯಾದ ರಾಜನಹಳ್ಳಿ ಹನುಮಂತಪ್ಪನವರ ವಂಶಸ್ಥರು ಕನ್ನಡ ಭಾಷೆ ಬಗ್ಗೆ ಹಗುರ ಮಾತನಾಡಿದ ಕಮಲ್ ಹಾಸನ್‌ನ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದು ಸಹ ಸರಿಯಲ್ಲ. ದಾವಣಗೆರೆಯ ಅಶೋಕ, ತ್ರಿಶೂಲ್, ತ್ರಿನೇತ್ರ, ಗೀತಾಂಜಲಿ ಸೇರಿ ಯಾವುದೇ ಚಿತ್ರ ಮಂದಿರವಾ

ಗಲಿ, ಎಸ್ಸೆಸ್ ಮಾಲ್‌ನ ಮಲ್ಟಿಫ್ಲೆಕ್ಸ್ ಆಗಲಿ ಥಗ್ ಲೈಫ್‌ ಬಿಡುಗಡೆ ಮುಂದಾದರೆ, ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುಟುರು ಹಾಕಿದರು.

ಕರವೇ ಮುಖಂಡರಾದ ಮಂಜುಳಾ ಮಹಾಂತೇಶ, ಮೀನಾಕ್ಷಮ್ಮ, ಸರೋಜಮ್ಮ, ಗೋಪಾಲ ದೇವರಮನಿ, ಜಬೀವುಲ್ಲಾ, ಗಿರೀಶಕುಮಾರ, ಆಟೋ ರಫೀಕ್, ಸುರೇಶ, ತುಳಸಿರಾಮ್‌, ರಾಖಿ, ವಿನಯ್‌, ಚಂದ್ರು, ಗುರುಮೂರ್ತಿ, ಮುಸ್ತಫಾ, ಇಬ್ರಾಹಿಂ, ಸಾದಿಕ್, ಅಬ್ಬು, ಪೈಲ್ವಾನ್ ಜಬೀವುಲ್ಲಾ, ನಾಗರಾಜ, ಸುರೇಶ, ರಮೇಸ, ರಾಕೇಶ, ಅಕ್ಷಯ್, ಬಸವರಾಜ, ಮಂಜುನಾಥ, ದಾದಾಪೀರ್‌, ಕಲ್ಲೂಲಾಲ್ ಚೌದರಿ, ಮಹೇಂದ್ರ ಇತರರು ಇದ್ದರು.

ಕೊಂಗ ಕಮಲ್ ಚಿತ್ರಕ್ಕೆ ವಿರೋಧ

ಕೊಂಗ ಕಮಲ್ ಹಾಸನ್‌ ಚಿತ್ರ ಥಗ್ ಲೈಫ್‌ನ್ನು ದಾವಣಗೆರೆ ನಗರ, ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಎಲ್ಲಿಯೂ ಬಿಡುಗಡೆ ಮಾಡುವುದು, ಪ್ರದರ್ಶನ ಮಾಡಬಾರದು.

ಸಚಿವ ಶಿವರಾಜ ತಂಗಡಗಿ ಸೇರಿದಂತೆ ಅನೇಕರು ಕಮಲ್ ಹಾಸನ್‌ ಬಗ್ಗೆ ವಿರೋಧ ವ್ಯಕ್ತಪಡಿಸದ್ದಾರೆ. ಚಿತ್ರ ಪ್ರದರ್ಶಿಸದಂತೆ ಎಚ್ಚರಿಸಿದ್ದೇವೆ. ನಮ್ಮ ಮಾತನ್ನೂ ಮೀರಿ ಪ್ರದರ್ಶಿಸಿದರೆ ಮುಂದೆ ಆಗುವ ಅನಾಹುತಕ್ಕೆ ಅವರೇ ಹೊಣೆ ಎಂದು ಎಂ.ಎಸ್‌.ರಾಮೇಗೌಡ ಹೇಳಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ