ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತೋಟಗಾರಿಕೆ ಇಲಾಖೆಯ ಅಧಿಕಾರಿ ವಿಷಕಂಠ ಅವರು ಲಘು ನೀರಾವರಿ ಯೋಜನೆ, ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್, ತಾಳೆ ಬೆಳೆ, ಜೇನು ಕೃಷಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಮತ್ತು ಇತರ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡಿದರು. ಕೇಂದ್ರದ ವಿಜ್ಞಾನಿ ಡಾ.ಮೋಹನ್‌ಕುಮಾರ್ ಅವರು ಹಸಿರೆಲೆ ಗೊಬ್ಬರ ಹಾಗೂ ಬೀಜೋಪಚಾರದ ಮಹತ್ವ ತಿಳಿಸಿ ಸೂಕ್ತ ಬೆಳೆ ತಳಿಗಳ ಆಯ್ಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ, ಚೆಂಡು ಹೂ ಮತ್ತು ಸಾಸಿವೆಗಳನ್ನು ಬಲೆ ಬೆಳೆಗಳಾಗಿ ಬೆಳೆಯುವುದರಿಂದಾಗುವ ಅನುಕೂಲಗಳನ್ನು ವಿವರಿಸಿದರು.
ಕೇಂದ್ರದ ಹವಾಮಾನ ತಜ್ಞ ರಜತ್ ಹವಾಮಾನ ಮುನ್ಸೂಚನೆಗಳ ಮಾಹಿತಿ ನೀಡುವ ಸಿಡಿಲು ಮತ್ತು ದಾಮಿನಿ ತಂತ್ರಾಂಶಗಳ ಅಳವಡಿಕೆ ಮತ್ತು ಬಳಕೆಯ ಮಾಹಿತಿಯನ್ನು ಪ್ರಾತ್ಯಕ್ಷಿಸಿದರು. ಬದಲಾಗುತ್ತಿರುವ ಹವಾಮಾನದಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಿ, ನಿರ್ವಹಿಸಲು ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಕುರಿತು ಮಾಹಿತಿ ನೀಡಿದರು. ಮಣ್ಣು ಪರೀಕ್ಷೆ, ಅದರ ಅನುಕೂಲಗಳು, ಜೈವಿಕ ಗೊಬ್ಬರ ಬಳಕೆ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆಯ ಮಾಹಿತಿ ಒದಗಿಸಿದರು. ಬೆಳೆಗಳನ್ನು ಭಾದಿಸುವ ಗೊಣ್ಣೆ ಹುಳು, ಥ್ರಿಪ್ಸ್ ನುಸಿ, ಜಂತುಹುಳು, ಸೊರಗು ರೋಗ, ಕೊಳೆ ರೋಗಗಳನ್ನು ಜೈವಿಕ ಪದ್ಧತಿಯಿಂದ ನಿರ್ವಹಿಸುವ ಕ್ರಮಗಳ ಬಗ್ಗೆ ತಿಳಿಸಿದ ಅವರು ರಾಗಿಯಲ್ಲಿ ಬೆಂಕಿ ರೋಗ ನಿರ್ವಹಿಸಲು ಶಿಲೀಂದ್ರ ನಾಶಕದೊಂದಿಗೆ ಬೀಜೋಪಚಾರದ ಮಹತ್ವವನ್ನು ಪ್ರಾತ್ಯಕ್ಷಿಕೆ ನೀಡಿದರು.ಇದೇ ವೇಳೆ ಮುಂಗಾರಿನ ಬೇಸಾಯಕ್ಕೆ ಅಳವಸಿಕೊಳ್ಳಬೇಕಾದ ನಿರ್ದಿಷ್ಟ ಕಾಲಾವಧಿಯ ಸೂಕ್ತ ಬೆಳೆ ತಳಿಗಳು ಸುಧಾರಿತ ತಂತ್ರಜ್ಞಾನಗಳು, ಕೃಷಿ ಹಾಗೂ ಕೃಷಿ ಸಂಬಂಧಿತ ಸರ್ಕಾರಿ ಯೋಜನೆಗಳ ಮಾಹಿತಿ ಹೊತ್ತ ಕೃಷಿ ಸಂಜೀವಿನಿಯೊಂದಿಗೆ ಕಾಲ್ನಡಿಗೆಯನ್ನು ಗ್ರಾಮಗಳಲ್ಲಿ ಕೈಗೊಳ್ಳಲಾಯಿತು. ಕೇಂದ್ರದ ಗೃಹ ವಿಜ್ಞಾನಿ ಡಾ.ದೀಪ ಅವರು ಅಭಿಯಾನದಲ್ಲಿ ಭಾಗವಹಿಸಿದ್ದ ರೈತರಿಂದ ಹಿಮ್ಮಾಹಿತಿ ಪಡೆದುಕೊಂಡರು. ಗ್ರಾಪಂ ಸದಸ್ಯರಾದ ಪ್ರಕಾಶ, ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ವಿನಯ್, ಧರ್ಮೇಂದ್ರ, ಉಪೇಂದ್ರ, ತಾಲ್ಲೂಕು ಸಾವಯವ ಪರಿವಾರ ಟ್ರಸ್ಟ್ನ ಅಧ್ಯಕ್ಷರಾದ ವೃಷಭೇಂದ್ರ, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣನಾಯ್ಕ, ರೈತ ಮುಖಂಡರಾದ ದೀನಕುಮಾರ್, ರಾಜಪ್ಪ, ಜಗದೀಶ ಇನ್ನಿತರರು ಇದ್ದರು.