ಧಾರವಾಡ: ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೊಳಿಸಲು ಒತ್ತಾಯಿಸಿ ಬುಧವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಭಾಗದಲ್ಲಿ ಜನರಿಗೆ ದೊರೆಯುವ ನರೇಗಾ ಕೆಲಸದ ಆಧಾರದ ಮೇಲೆ ಇಲ್ಲಿನ ಜನ ಗುಳೆ ಹೋಗುವುದನ್ನು ನಿಲ್ಲಿಸಿದ್ದಾರೆ. ಆದರೆ, ಈ ಯೋಜನೆಯಲ್ಲಿ ಈಗ ಕೆಲಸ ಮಾಡಿ, ಎರಡು ತಿಂಗಳು ಕಳೆದರೂ ಸಹ ಅವರಿಗೆ ದೊರೆಯಬೇಕಿದ್ದ ಕೂಲಿಯು ಇನ್ನು ದೊರೆತಿಲ್ಲ. ಅವರನ್ನು ಮತ್ತು ಅವರ ಕುಟುಂಬವನ್ನು ಸಂಕಷ್ಟಕ್ಕೆ ನೂಕಿದಂತಾಗಿದೆ. ಇಂದಿನ ದಿನಮಾನಗಳಲ್ಲಿ ಅಡುಗೆ ಎಣ್ಣೆ, ಬೆಳೆ-ಕಾಳುಗಳು, ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಹಲವಾರು ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ಈಗ ಅವರು ಜೀವನ ನಡೆಸಲು ಕೂಡಲೇ ಅವರಿಗೆ ಹಣದ ಅವಶ್ಯಕತೆ ಇದೆ. ಆದ್ದರಿಂದ ಕೂಲಿ ಕಾರ್ಮಿಕರ ಹಿತ ದೃಷ್ಟಿಯಿಂದ ಕೂಡಲೇ ಇವರ ಬಾಕಿ ಇರುವ ವೇತನ ಬಿಡುಗಡೆಗೊಳಿಸಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಮಾತನಾಡಿ, ವೇತನ ನೀಡದೇ ಇರುವುದು ಕೂಲಿ ಕಾರ್ಮಿಕರ ಬದುಕಿಗೆ ತೊಂದರೆಯಾಗಿದೆ. ಜತೆಗೆ ಈ ಯೋಜನೆಯಡಿ ಸಿಗಬೇಕಾಗಿದ್ದ 100 ದಿನದ ಕೆಲಸ ಮತ್ತು ಪೂರ್ಣ ಕೂಲಿ ₹370ಗಳು ದೊರೆಯದೆ ಹೋಗಬಹುದು ಎಂಬ ಆತಂಕವೂ ಕಾರ್ಮಿಕರದ್ದಾಗಿದೆ. ಕೆಲವು ಪಂಚಾಯಿತಿಗಳಲ್ಲಿ ನಿರಂತರವಾಗಿ ಕೆಲಸ ನೀಡುವ ಕಾರ್ಯವು ಆಮೆಗತಿಯಲ್ಲಿ ಸಾಗುತ್ತಿದೆ ಎಂದರು.ಪ್ರತಿಭಟನೆ ಅಧ್ಯಕ್ಷತೆಯನ್ನು ಬಾಳೇಶ ಬೋಗೆನ್ನವರ ವಹಿಸಿದ್ದರು. ಈ ಸಂದರ್ಭದಲ್ಲಿ ರಾಣಪ್ಪ ಸಾವಂತನವರ, ಮಾರತಿ ಪೂಜಾರ , ವಿಜಯಲಕ್ಷ್ಮಿ ನಿಕ್ಕಂ, ಹನುಮವ್ವ, ಗಂಗಾಧರ ಜಾಧವ್ ಮುಂತಾದವರು ಇದ್ದರು.