ಬಿ.ಶೇಖರ್ ಗೋಪಿನಾಥಂ
ಕಾಲಕ್ಕೆ ತಕ್ಕಂತೆ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳು ಹಿಂದಿನಿಂದಲು ಆಗುತ್ತಿದೆ. ಇದಕ್ಕೆ ಹೊಸದಾಗಿ ಡ್ರೋನ್ ತಂತ್ರಜ್ಞಾನ ಸೇರ್ಪಡೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಡ್ರೋನ್ ಗಳ ಬಳಕೆ ತಂತ್ರಜ್ಞಾನದ ಪ್ರಮುಖ ವಿಕಾಸವಾಗಿದೆ.
ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಡ್ರೋನ್‌ಗಳು ರೈತರಿಗೆ ಹೆಚ್ಚು ಪರಿಣಾಮಕಾರಿ, ನಿಖರ ಮತ್ತು ಕಡಿಮೆ ವೆಚ್ಚದ ಪರಿಹಾರಗಳನ್ನು ಒದಗಿಸುತ್ತಿವೆ. ಕೀಟನಾಶಕ ಮತ್ತು ರಸಗೊಬ್ಬರಗಳ ಸಿಂಪಡಣೆಯಲ್ಲಿ ಡ್ರೋನ್ ಬಳಕೆಯಿಂದ ಕಾರ್ಮಿಕರ ಅವಶ್ಯಕತೆಯನ್ನು ಕಡಿಮೆ ಮಾಡುವುದಲ್ಲದೆ, ರಾಸಾಯನಿಕಗಳ ನೇರ ಸಂಪರ್ಕದಿಂದ ರೈತರಿಗೆ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುತ್ತವೆ.ಡ್ರೋನ್ ಗಳಲ್ಲಿ ಅಳವಡಿಸಲಾದ ಉತ್ತಮ ಗುಣಮಟ್ಟದ ಕ್ಯಾಮರಾಗಳು ಮತ್ತು ಸಂವೇದಕಗಳು ಬೆಳೆಗಳ ಆರೋಗ್ಯ ಸ್ಥಿತಿಯನ್ನು ಪತ್ತೆ ಹಚ್ಚಲು ಮತ್ತು ಕೀಟ ಅಥವಾ ರೋಗ ಬಾಧಿತ ಪ್ರದೇಶಗಳನ್ನು ಗುರುತಿಸಲು ನೆರವಾಗುತ್ತವೆ. ಅಲ್ಲದೆ, ಬೀಜ ಬಿತ್ತುವುದು, ಜಮೀನಿನ ಸಮೀಕ್ಷೆ ಮತ್ತು ಮ್ಯಾಪಿಂಗ್ ಮತ್ತು ನೀರಿನ ನಿರ್ವಹಣೆಗೆ ಡ್ರೋನ್ ಸಹಕಾರಿ ಆಗಿದೆ.
ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಡ್ರೋನ್ ಗಳು ಒಂದು ದಿನದಲ್ಲಿ ಹೆಚ್ಚಿನ ಪ್ರದೇಶವನ್ನು ಆವರಿಸಬಲ್ಲವು. ಒಬ್ಬ ಮನುಷ್ಯ ಪ್ರತಿ ದಿನ ಕೇವಲ ಒಂದು ಎಕರೆಯಷ್ಟು ಕೀಟನಾಶಗಳನ್ನು ಸಿಂಪಡಿಸಬಹುದಾಗಿದ್ದು, ಡ್ರೋನ್ ಸಹಾಯದಿಂದ ಪ್ರತಿಗಂಟೆಗೆ 20 ಎಕರೆಯಷ್ಟು ಸಿಂಪಡಣೆ ಮಾಡಬಹುದಾಗಿದೆ.
ಭವಿಷ್ಯದ ಬೆಳವಣಿಗೆಗಳು:
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅನುಗುಣವಾಗಿ ಕಡಿಮೆ ಬೆಲೆಯ ಡ್ರೋನ್ ಗಳನ್ನು ತಯಾರಿಸಲು ಹಲವು ಸ್ಟಾರ್ಟ್ ಅಪ್ ಗಳು ಕೆಲಸ ಮಾಡುತ್ತಿವೆ. ಇದರಿಂದ ಸಣ್ಣ ರೈತರಿಗೂ ತಂತ್ರಜ್ಞಾನ ಸುಲಭವಾಗಿ ಲಭ್ಯವಾಗುತ್ತದೆ. ಜಾನುವಾರುಗಳ ಚಲನೆಯನ್ನು ಗಮನಿಸುವುದು, ಕಾಯಿಲೆ ಅಥವಾ ಗಾಯಗೊಂಡಿರುವ ಪ್ರಾಣಿಗಳನ್ನು ಪತ್ತೆ ಹಚ್ಚುವುದು ಇತ್ಯಾದಿ ಕೆಲಸಗಳಿಗೆ ಡ್ರೋನ್ ಗಳಲ್ಲಿ ಅಳವಡಿಸಿರುವ ಥರ್ಮಲ್ ಕ್ಯಾಮರಾಗಳು ಸಹಾಯ ಮಾಡುತ್ತವೆ ಎಂದು ಮೈಸೂರು ತಾಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಕೃಷಿ ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್. ಮೌಲ್ಯ ವಿವರಿಸಿದ್ದಾರೆ.ಡ್ರೋನ್ ಬಳಕೆಯ ಸವಾಲುಗಳಿವೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಯಲ್ಲಿ ಡ್ರೋನ್ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮ ತೆಗೆದುಕೊಂಡಿದೆ. ಪಿಎಂ ಕಿಸಾನ್ ಡ್ರೋನ್ ಯೋಜನೆಯಡಿ ರೈತರಿಗೆ ಡ್ರೋನ್ ಖರೀದಿಸಲು ಮತ್ತು ತರಬೇತಿಗೆ ಸಹಾಯಧನ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರವು ಈಗಾಗಲೇ ಕೆಲವು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಡ್ರೋನ್‌ಗಳನ್ನು ಬಳಸುತ್ತಿದೆ.