-ಇಂದು ರಾಜ್ಯ ಸರ್ಕಾರ, ಕೆಕೆಆರ್‌ಡಿಬಿ ಸಹಯೋಗದಲ್ಲಿ 1, 128 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಅಡಿಗಲ್ಲು
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹನುಮನು ಉದಯಿಸಿರುವ ನಾಡು ಕೊಪ್ಪಳದಲ್ಲಿ 1, 128 ಕೋಟಿ ರು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭ ಅ. 6ರ ಸೋಮವಾರ ನಡೆಯಲಿದೆ.ಆರೋಗ್ಯ, ಶಿಕ್ಷಣ, ಹಿಂದುಳಿದ ವರ್ಗಗಳು, ನೀರಾವರಿ ಸೇರಿದಂತೆ ಹಲವಾರು ಇಲಾಖೆಯಲ್ಲಿನ ಪ್ರಗತಿ ಯೋಜನೆಗಳಿಗೆ ಸಹಯೋಗ ನೀಡುವ ಮೂಲಕ ಕೆಕೆಆರ್‌ಡಿಬಿ ಕೊಪ್ಪಳದಲ್ಲಿ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆದಿದೆ. ಕೆಕೆಆರ್‌ಡಿಬಿ ಅಧ್ಯಕ್ಷರೂ ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಈ ಮಹತ್ವದ ಹಾಗೂ ಪ್ರಗತಿಪರ ಸಮಾರಂಭಕ್ಕೆ ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿಯವರು, ಯೋಜನಾ ಇಲಾಖೆ ಸಚಿವರಾದ ಸುಧಾಕರ್ , ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಕಲ್ಯಾಣ ನಾಡಿನ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ವಿವಿದ ಇಲಾಖೆ ಸಚಿವರು, ಕಲ್ಯಾಣದಡಿಯಲ್ಲಿ ಬರುವ ವಿವಿಧ ಕ್ಷೇತ್ರಗಳ ಶಾಸಕರು ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ಈ ಮಹತ್ವದ ಹಾಗೂ ಅಭಿವೃದ್ಧಿ ಪರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
.....ಬಾಕ್ಸ್.....
ಕೊಪ್ಪಳ ಜಿಲ್ಲೆಗೆ ಕೆಕೆಆರ್‌ಡಿಬಿ ವಿಶೇಷ ಒತ್ತು ನೀಡಿದ್ದು, ಕೆಕೆಆರ್‌ಬಿಯ ಹಿಂದುಳಿದ ವರ್ಗಗಳ ಕಲ್ಯಾಣ ಕ್ರಾಂತಿಯ ಸಮಾರಂಬಕ್ಕೆ ಕೊಪ್ಪಳವನ್ನೇ ಆಯ್ಕೆ ಮಾಡಲಾಗಿದ್ದು, ಈ ಭಾಗದಲ್ಲಿನ ಕೆಕೆಆರ್‌ಡಿಬಿ ಯೋಜನೆಗಳಿಗೆ ವೇಗ ದೊರಕಲಿ ಎಂಬುದೇ ಉದ್ದೇಶ ಎಂದು ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಕುಕನೂರ್ ತಾಲೂಕಿನ ತಳಕಲ್‌ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಅಡಿ ಜಿಟಿಟಿಸಿ ಬಹು ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೂ ಕೆಕೆಆರ್‌ಡಿಬಿ ಅನುದಾನದಲ್ಲಿ ನೆರವು ನೀಡಲಾಗಿದೆ. ಕೊಪ್ಪಳದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಕೆಕೆಆರ್‌ಡಿಬಿ ತನ್ನ ಸಹಯೋಗ ವಿಸ್ತರಿಸಿದೆ ಎಂದೂ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.