ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದೇ ನಮೂದಿಸಿ: ಡಾ.ವೈ.ಕೆ.ಬಾಲಕೃಷ್ಣ

KannadaprabhaNewsNetwork |  
Published : Oct 06, 2025, 01:00 AM IST
೫ಶಿರಾ೧: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಒಳಮೀಸಲಾತಿ ಹೋರಾಟ ಸಮಿತಿಯ ಡಾ.ವೈ.ಕೆ.ಬಾಲಕೃಷ್ಣ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕದಲ್ಲಿನ ಜನರ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸಲು ಸಂವಿಧಾನದ ಆಶಯದಂತೆ ಹಿಂದುಳಿದವರ ಬಗ್ಗೆ ತಿಳಿಯಲು ಸಮೀಕ್ಷೆ ಮಾಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ.

ಕನ್ನಡಪ್ರಭ ವಾರ್ತೆ ಶಿರಾ

ರಾಜ್ಯ ಸರ್ಕಾರ ಸೆ. 22 ರಿಂದ ಅ. 7ರವರೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಕರ್ನಾಟಕ ರಾಜ್ಯದ ಸುಮಾರು 7.50 ಕೋಟಿ ಜನರ ಸಾಮಾಜಿಕ, ಶೈಕ್ಷಣಿ ಮತ್ತು ಆರ್ಥಿ ಸಮೀಕ್ಷೆ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಆದರೆ ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರಿಗೆ ಮಾಹಿತಿ ಕೊರತೆಯಿಂದ ಮಾದಿಗರು ಆದಿ ಕರ್ನಾಟಕ ಎಂದು ಕೆಲವು ಕಡೆ ನಮೂದಿಸಿದ್ದು ಈ ಬಗ್ಗೆ ಸರ್ಕಾರ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಒಳಮೀಸಲಾತಿ ಹೋರಾಟ ಸಮಿತಿಯ ಡಾ.ವೈ.ಕೆ.ಬಾಲಕೃಷ್ಣ ಹೇಳಿದರು.

ಈ ಬಗ್ಗೆ ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದಲ್ಲಿನ ಜನರ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸಲು ಸಂವಿಧಾನದ ಆಶಯದಂತೆ ಹಿಂದುಳಿದವರ ಬಗ್ಗೆ ತಿಳಿಯಲು ಸಮೀಕ್ಷೆ ಮಾಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಒಳಮೀಸಲಾತಿ ಹೋರಾಟಗಾರರಾದ ನಮಗೆ ಆತಂಕ ಏನೆಂದರೆ ಕಳೆದ ಮೂರು ತಿಂಗಳ ಹಿಂದೆ ಒಳಮೀಸಲಾತಿ ಜಾರಿಗೆ ನೇಮಿಸಿದ್ದ ಡಾ.ನಾಗಮೋಹನ್ ದಾಸ್ ಆಯೋಗದಲ್ಲಿ ಸಮೀಕ್ಷೆ ಮಾಡುವವರಿಗೆ ಹಲವು ಬಾರಿ ತರಬೇತಿ ನೀಡಲಾಗಿತ್ತು.

ಸುಮಾರು 1.05 ಕೋಟಿ ಜನಸಂಖ್ಯೆ ಸಮೀಕ್ಷೆಗೆ ಗಣತಿದಾರರಿಗೆ ಹಲವು ಬಾರಿ ತರಬೇತಿ ನೀಡಿತ್ತು. ಆದರೆ 7.50 ಕೋಟಿ ಜನರ ಸಮೀಕ್ಷೆ ಮಾಡುವ ಈ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಗಣತಿದಾರರಿಗೆ ಸರಿಯಾಗಿ ತರಬೇತಿಯೇ ನೀಡಿಲ್ಲ. ಈ ಗಣತಿಯಲ್ಲಿ ಬಹಳಷ್ಟು ಕುಟುಂಬಗಳಿಗೆ ಹಿಂದುಳಿದ ಜಾತಿಗೆ ಸೇರಿದ ಸಮೀಕ್ಷೆ ಎಂದು ಭಾವಿಸಿದ್ದಾರೆ. ನಮ್ಮ ಸಮುದಾಯದ ಮುಗ್ದರು ತಮ್ಮ ಜಾತಿ ಕಾಲಂನಲ್ಲಿ ಮಾದಿಗ ಎಂದು ನಿಖರವಾಗಿ ನಮೂದಿಸಿಲ್ಲ. ಶಿರಾ ತಾಲೂಕಿನ ಕ್ಯಾದಿಗುಂಟೆ, ಪಟ್ಟನಾಯಕನಹಳ್ಳಿ, ಬ್ರಹ್ಮಸಂದ್ರ, ಕಳುವರಹಳ್ಳಿ, ಮೆಳೆಕೋಟೆ ಸೇರಿದಂತೆ ಇನ್ನು ಹಲವು ಗ್ರಾಮಗಳಲ್ಲಿ ಮಾದಿಗ ಜಾತಿ ಬದಲಾಗಿ ಆದಿ ಕರ್ನಾಟಕ ಎಂದು ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ.

ಆದ್ದರಿಂದ ಈ ಕೂಡಲೇ ಸರ್ಕಾರ, ಜಿಲ್ಲಾಡಳಿತ ಈ ಬಗ್ಗೆ ಸರಿಯಾದ ಕ್ರಮ ಕೈಗೊಂಡು ಕೂಲಂಕುಶವಾಗಿ ಸಮೀಕ್ಷೆದಾರರಿಗೆ ಜಾತಿ ಕಾಲಂನಲ್ಲಿ ನಮೂದು ಮಾಡುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಆಯೋಗದ ಸಮೀಕ್ಷೆಯು ಮುಂದೊಂದು ದಿನ ಸದಾಶಿವ ಆಯೋಗದ ವರದಿಯಂತೆ, ಕಾತರಾಜು ಆಯೋಗದ ವರದಿಯಂತೆ ತಿರಸ್ಕಾರವಾಗುತ್ತದೆ. ಜನಸಾಮಾನ್ಯರ ನೂರಾರು ಕೋಟಿ ತೆರಿಗೆ ಹಣ ವ್ಯರ್ಥವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಮಾಜಿ ತಾ.ಪಂ. ಸದಸ್ಯ ಪಿ.ಬಿ.ನರಸಿಂಹಯ್ಯ, ಜಿಲ್ಲಾ ಡಿಎಸ್‌ಎಸ್ ಮುಖಂಡ ನರಸಿಂಹಯ್ಯ, ನಿವೃತ್ತ ಉಪ ಪ್ರಾಂಶುಪಾಲ ರಾಮಚಂದ್ರಪ್ಪ, ಮುಖಂಡರಾದ ಶಾಸಮರು ಮೂರ್ತಿ, ಹುಣಸೆಹಳ್ಳಿ ವೀರಸೇನ, ಜಯರಾಮಕೃಷ್ಣ, ಗುಮ್ಮನಹಳ್ಳಿ ಮಂಜುನಾಥ್, ಹನುಮಂತಪ್ಪ ಸೇರಿದಂತೆ ಹಲವರು ಹಾಜರಿದ್ದರು.

೫ಶಿರಾ೧: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಒಳಮೀಸಲಾತಿ ಹೋರಾಟ ಸಮಿತಿಯ ಡಾ.ವೈ.ಕೆ.ಬಾಲಕೃಷ್ಣ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

PREV

Recommended Stories

ಪಿಎಸ್‌ಐ 545 ಹುದ್ದೆಗಳ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ
ಕನ್ನಡಿಗ ಪಾಟೀಲ್‌ಗೆ ಅಮೆರಿಕ ಎಐ ಕಂಪನಿಯ ಉನ್ನತ ಹುದ್ದೆ