ಕನ್ನಡಪ್ರಭ ವಾರ್ತೆ ಶಿಕಾರಿಪುರ
ಆಸ್ಪತ್ರೆಯೊಂದನ್ನು ಕಟ್ಟಿದರೆ ಅಲ್ಲಿ ಎಲ್ಲ ಧರ್ಮ ಜಾತಿ ಜನಾಂಗದವರು ಚಿಕಿತ್ಸೆ ಪಡೆಯುತ್ತಾರೆ, ಶಾಲೆಯೊಂದನ್ನು ಕಟ್ಟಿದರೆ ಅಲ್ಲಿ ಎಲ್ಲಾ ಜಾತಿ ಜನಾಂಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ತಾಲೂಕಿನಲ್ಲಿ ಅಭಿವೃದ್ಧಿ ಕೇವಲ ಸೀಮಿತ ಜಾತಿ ಧರ್ಮಕ್ಕೆ ಮೀಸಲಾಗಿಲ್ಲ ಎಂದು ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಸೋಮವಾರ ಅವರು ತಾಲೂಕಿನ ಬಗನಕಟ್ಟೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾದ ಆಯುಷ್ಮಾನ್ ಆರೋಗ್ಯ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಯಡಿಯೂರಪ್ಪನವರ ಕನಸುಗಳು ಸಂಸದ ಬಿ.ವೈ.ರಾಘವೇಂದ್ರ ಪರಿಶ್ರಮ ದಿಂದ ನನಸಾಗಿವೆ, ರಸ್ತೆಗಳು, ನೀರಾವರಿ ಯೋಜನೆಗಳು, ತಾಲೂಕಿನ ಕೆರೆಗಳ ತುಂಬಿಸುವ ಯೋಜನೆಗಳು, ಸಮುದಾಯ ಭವನಗಳು, ಎಸ್ಸಿ ಎಸ್ಟಿ ವಿದ್ಯಾರ್ಥಿ ನಿಲಯಗಳು, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳು ಮುರಾರ್ಜಿ ದೇಸಾಯಿ ವಸತಿ ಶಾಲೆಗಳು,ರಾಜ್ಯದ ಯಾವುದೇ ತಾಲೂಕಿನಲ್ಲಿ ಇಲ್ಲದಷ್ಟು ನಿರ್ಮಾಣಗೊಂಡಿದ್ದು ತಾಲೂಕಿನ ಜನತೆ ಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ರೈತರ ಪಂಪ್ ಸೆಟ್ಟು ಪದೇಪದೇ ಹಾಳಾಗುತ್ತಿದ್ದವು ಇದನ್ನು ಮನಗಂಡ ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ವಿದ್ಯುತ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಿ ಉತ್ತಮ ಗುಣಮಟ್ಟದ ವೋಲ್ಟೇಜ್ ವಿದ್ಯುತ್ ನ್ನು ರೈತರ ಪಂಪ್ ಸೆಟ್ ಗಳಿಗೆ ನೀಡಿ ಅವರ ಸಮಸ್ಯೆಯನ್ನು ಪರಿಹರಿಸಿದರು.ತಾಲೂಕಿನ ಜನತೆ ಅಕ್ಕ ಪಕ್ಕದ ತಾಲೂಕುಗಳಲ್ಲಿ ಓಡಾಡಿ ಅಲ್ಲಿಯ ಸಮಸ್ಯೆಗಳನ್ನು ಕೇಳಿದಾಗ ನಿಜಕ್ಕೂ ನಮ್ಮ ಕೆಲಸಗಳ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದರು.ನಗರ ಮತ್ತು ಗ್ರಾಮೀಣ ಭಾಗಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿರುವುದು ನಮ್ಮ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೆಟ್ಯಮ್ಮ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ ಎಸ್ ನಟರಾಜ,ತಾಲೂಕು ನೋಡಲ್ ಅಧಿಕಾರಿ ಡಾ.ನಾಗರಾಜ್ ನಾಯಕ್,ತಾಲೂಕು ಆರೋಗ್ಯ ಅಧಿಕಾರಿ ಡಾ. ನವೀದ್ ಖಾನ್,ಆಡಳಿತ ವೈದ್ಯಾಧಿಕಾರಿ ಡಾ.ರಾಮ್ ಕುಮಾರ್,ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ವಿ ಸುರೇಶ್,ಮಾರವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಮುಖಂಡ ಗುರುಮೂರ್ತಿ,ಹನುಮಂತಪ್ಪ ಸಂಕ್ಲಾಪುರ,ಪ್ರವೀಣಶೆಟ್ಟಿ, ಬೆಣ್ಣೆ ಪ್ರವೀಣ, ರವಿಕಾಂತ [ಪುಟ್ಟ] ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.