ಗ್ರಾಮ ಪಂಚಾಯಿತಿವಾರು ಸೌಹಾರ್ದ ಸಭೆ: ತಂಗಡಗಿ

KannadaprabhaNewsNetwork |  
Published : Sep 18, 2024, 01:58 AM IST

ಸಾರಾಂಶ

ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಸೌರ್ಹಾದ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಸೌರ್ಹಾದ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿಠಲಾಪುರ ಘಟನಾ ಸ್ಥಳಕ್ಕೆ ಹಾಗೂ ಸಂಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದೇನೆ, ಕಾನೂನು ರೀತಿಯಲ್ಲಿ ಕ್ರಮವಹಿಸಿದ್ದೇವೆ ಎಂದರು.

ಪದೇ ಪದೇ ನಡೆಯುತ್ತಿರುವ ಘಟನೆಗಳ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಗೂ ಸೂಚನೆ ನೀಡಲಾಗಿದೆ. ಇದಲ್ಲದೆ ಶಾಂತಿ ಮತ್ತು ಸೌರ್ಹದತೆಗಾಗಿ ಸಭೆ ನಡೆಸಲಾಗುತ್ತದೆ ಎಂದರು.

ತುಂಗಭದ್ರಾ ಕ್ರಸ್ಟ್ ಗೇಟ್ ಮುರಿದು, ಅದನ್ನು ಮರು ಅಳವಡಿಸಿದ ಮೇಲೆ ತುಂಗಭದ್ರಾ ಬೋರ್ಡ್ ಸತ್ಯಶೋಧನಾ ಸಮಿತಿ ಆಗಮಿಸಿ, ಪರಿಶೀಲಿಸಿದೆ. ಆದರೆ, ಆ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ತುಂಗಭದ್ರಾ ಜಲಾಶಯ ಸಾಮರ್ಥ್ಯ 105 ಟಿಎಂಸಿ ಇದ್ದರೂ 101 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತದೆ. ಸ್ಟಾಪ್ ಲಾಗ್ ಗೇಟ್ ಮೇಲೆ ನೀರು ಹರಿಯುವ ಸಾಧ್ಯತೆ ಇರುವುದರಿಂದ ಸಂಗ್ರಹ ಕಡಿಮೆ ಮಾಡಲಾಗಿದೆ. ಇದರಿಂದ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ತುಂಗಭದ್ರಾ ಕ್ರಸ್ಟ್ ಗೇಟ್ ಗಳನ್ನ ಪ್ರತಿ 40 ವರ್ಷಕ್ಕೊಮ್ಮೆ ಬದಲಾಯಿಸಬೇಕಾಗಿದ್ದರೂ ಬದಲಾಯಿಸಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಸಮಾಂತರ ಜಲಾಶಯ ನಿರ್ಮಾಣ ಕೇವಲ ರಾಜ್ಯ ಸರ್ಕಾರದ ಕೈಯಲ್ಲಿ ಇಲ್ಲ. ನೆರೆಯ ರಾಜ್ಯಗಳ ಸಮ್ಮತಿಯೂ ಬೇಕಾಗುತ್ತದೆ. ಹೀಗಾಗಿ ಪ್ರಕ್ರಿಯೆ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಏನು ಆಗಿಲ್ಲ ಎಂದು ಆರೋಪಿಸಿದರು.

ಗಂಗಾವತಿಯಲ್ಲಿ ಡ್ರಗ್ ಪೂರೈಕೆ ಬಗ್ಗೆ ಮಾಧ್ಯಮದಲ್ಲಿ ಗಮನಿಸಿರುವೆ. ಎಸ್ಪಿಗೆ ಸೂಚನೆ ನೀಡಿದ್ದು ಅಂತಹ ಘಟನೆಗಳಿಗೆ ಅವಕಾಶ ಕೊಡುವುದಿಲ್ಲ. ಇನ್ನು ಕೊಪ್ಪಳದಲ್ಲಿ ಸಿಡಿಆರ್ ಸೋರಿಕೆ ಮಾಡಿದ ಪೊಲೀಸ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಆತನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿ ಇತರರಿದ್ದರು.

PREV