ಹೊಸಪೇಟೆ: ನಗರದ ಫ್ರೀಡಂ ಪಾರ್ಕ್ ರೀತಿಯಲ್ಲಿ ಇತರ ಪಾರ್ಕ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಹೇಳಿದರು.ನಗರದ ಫ್ರೀಡಂ ಪಾರ್ಕ್‌ನಲ್ಲಿ ಪತಂಜಲಿ ಯೋಗ ಸಮಿತಿಯ ಗದಗ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ. ಹಂದ್ರಾಳ ನೇತೃತ್ವದಲ್ಲಿ ನಡೆದ ವಿಶೇಷ ಯೋಗ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನು ನಾವು ಯೋಗ, ಧ್ಯಾನ, ನಡಿಗೆಯಂತಹ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಮೀಸಲಿಡಬೇಕು. ಈ ಹಿಂದೆ ಉದ್ಯಾನಗಳಿಗೆ ಹೋಗುವವರೇ ಇರಲಿಲ್ಲ. ನಗರಸಭೆ ಉದ್ಯಾನಗಳ ಬಗ್ಗೆ ಕಾಳಜಿ ವಹಿಸಿದ ಬಳಿಕ ಇಂದು ಜನರು ಉದ್ಯಾನಗಳತ್ತ ಬರುತ್ತಿದ್ದಾರೆ. ಎಷ್ಟೇ ಒತ್ತಡ ಇದ್ದರೂ ನಮ್ಮ ಆರೋಗ್ಯದ ಸಲುವಾಗಿ ನಾವು ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಲೇಬೇಕು ಎಂದು ರೂಪೇಶಕುಮಾರ್ ಹೇಳಿದರು.
ಇದಕ್ಕೆ ಮೊದಲು ಡಾ.ಎಸ್.ಬಿ. ಹಂದ್ರಾಳ್ ಜೂ.21ರಂದು ನಡೆಯುವ 12ನೇ ವಿಶ್ವ ಯೋಗ ದಿನದಂದು ಮಾಡಲು ಆಯುಷ್ ಇಲಾಖೆ ಸಿದ್ಧಪಡಿಸಿರುವ ಪ್ರೊಟೊಕಾಲ್ ಯೋಗದ ತರಬೇತಿ ನೀಡಿದರು. ಜೊತೆಗೆ ಚಂದ್ರಭೇದನ ಪ್ರಾಣಾಯಾಮ ಮಾಡುವ ವಿಧಾನ ತಿಳಿಸಿ, ಅದರ ಮಹತ್ವ ಹಾಗೂ ಇತರ ಹಲವು ಉಪಯುಕ್ತ ಯೋಗಾಸನ, ಪ್ರಾಣಾಯಫಾಮಗಳ ಮಾಹಿತಿ ನೀಡಿದರು.ಸೂರ್ಯ ನಮಸ್ಕಾರದ ಭಂಗಿಯ 12 ಪ್ರತಿಮೆಗಳ ನಡುವಿನ ಇಂಟರ್‌ಲಾಕ್ ಅಳವಡಿಸಿದ ಸ್ಥಳದಲ್ಲಿ ಡಾ.ಹಂದ್ರಾಳ ಮಾರ್ಗದರ್ಶನದಲ್ಲಿ 200ಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ನಡೆಸಿಕೊಟ್ಟ ಯೋಗ ಅದ್ಭುತ ದೃಶ್ಯಕಾವ್ಯ ಬರೆಯಿತು. ಇಲ್ಲಿ ಜೂನ್ 22ರಿಂದ ನಿರಂತರ ಯೋಗ ಕಕ್ಷೆ ನಡೆಯಲಿದೆ. ಇಲ್ಲಿ ವಾಕಿಂಗ್ ಪಥವೂ ಇದ್ದು, ಮುಕ್ತ ಜಿಮ್, ಸುಸಜ್ಜಿತ ಶೌಚಾಲಯ ಸಹ ಇದೆ.
ಪಾರ್ಕ್‌ನ ಉಸ್ತುವಾರಿ ಅನಂತ ಜೋಶಿ ಪ್ರಾಸ್ತಾವಿಕ ಮಾತನಾಡಿ, ಉದ್ಯಾನ ನಿರ್ಮಿಸಿಕೊಟ್ಟ ನಗರಸಭೆಗೆ ಕೃತಜ್ಞತೆ ಸಲ್ಲಿಸಿದರು.