ಪಾಲಾಕ್ಷ ಬಿ.ತಿಪ್ಪಳ್ಳಿ ಯಲಬುರ್ಗಾ
ಬಸವರಾಜ ರಾಯರಡ್ಡಿ ಒಟ್ಟು ಆರು ಬಾರಿ ವಿಧಾನ ಸಭೆಯ ಸದಸ್ಯರಾಗಿದ್ದಾರೆ. ೧೯೮೩ರಲ್ಲಿ ಕ್ರಾಂತಿರಂಗದಿಂದ ರಾಜಕೀಯ ಪ್ರವೇಶ ಮಾಡಿದ ರಾಯರಡ್ಡಿ, ೧೯೮೫ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದಿಂದ ೨೭ನೇ ವಯಸ್ಸಿಗೆ ಶಾಸಕರಾದರು. ೧೯೮೯, ೧೯೯೪ರಲ್ಲಿ ಜನತಾ ದಳದಿಂದ ಶಾಸಕರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ೧೯೯೪ರಲ್ಲಿ ಎಚ್.ಡಿ. ದೇವೇಗೌಡ ಕ್ಯಾಬಿನೆಟ್‌ನಲ್ಲಿ ವಸತಿ ಸಚಿವರಾದರು. ೧೯೯೬ರಲ್ಲಿ ಲೋಕಸಭಾ ಸಂಸದರಾದರು. ಅಲ್ಲದೆ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ದೆಹಲಿ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಧಾನ ಸಭೆಯ ಮುಖ್ಯಸಚೇತಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೧೬ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ರಾಯಚೂರು-ಕೊಪ್ಪಳ ಸೇರಿದಂತೆ ಇತರ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೨೩-೨೬ರ ವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಿಎಂ ಆರ್ಥಿಕ ಸಲಹೆಗಾರರಾಗಿ ಸರ್ಕಾರದ ಆರ್ಥಿಕ ಸುಧಾರಣೆ ಮತ್ತು ಉತ್ತಮ ಆಡಳಿತ ನಡೆಸಲು ಸಲಹೆ ಸೂಚನೆ ನೀಡುವಲ್ಲಿ ರಾಯರಡ್ಡಿ ಶ್ರಮಿಸಿದ್ದಾರೆ.
ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿದ್ದಾರೆ. ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಯರಡ್ಡಿ ನಾಡಿನ ಮಹಿಳೆಯ ಹೆಸರಿನಲ್ಲಿಯೇ ನಿವೇಶನ ಮತ್ತು ಮನೆಗಳ ಹಂಚಿಕೆಯಲ್ಲಿ ಹೊಸ ಭಾಷ್ಯ ಬರೆದು ಅದ್ಭುತ ಕಾರ್ಯ ಮಾಡಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿದ್ದಾಗಲೂ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಯೋಜನೆ, ಬೆಂಗಳೂರಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಐಐಟಿ ಸ್ಥಾಪನೆ ಮಾಡಿದರು. ಜತೆಗೆ ಯಲಬುರ್ಗಾದಲ್ಲಿ ಸ್ನಾತಕೋತ್ತರ ಕೇಂದ್ರ, ಬಿಎಸ್ಸಿ ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ರಾಯರಡ್ಡಿ ಆಡಳಿತದ ಅನುಭವ ಮತ್ತು ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಿರುವುದು ಗಮನಾರ್ಹ.ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ರಾಜ್ಯ, ರಾಷ್ಟ್ರ ಮಟ್ಟಕ್ಕೆ ಯಲಬುರ್ಗಾ ಕ್ಷೇತ್ರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಮುಖ್ಯವಾಗಿ ಗದಗ-ವಾಡಿ ರೈಲ್ವೆ ನಿರ್ಮಾಣ, ಕೆರೆ ತುಂಬಿಸುವ ಯೋಜನೆ, ಆಲಮಟ್ಟಿಯಿಂದ ಯಲಬುರ್ಗಾದವರೆಗೆ ₹೭೬೫ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದಾರೆ. ತಳಕಲ್‌ನಲ್ಲಿ ಇಂಜಿನಿಯರಿಂಗ್ ಕಾಲೇಜು, ಕೌಶಲ್ಯಾಭಿವೃದ್ಧಿ ಕೇಂದ್ರ, ೬೦೦೦ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಅತಿ ಹೆಚ್ಚು ಶಾಲಾ ಕಾಲೇಜು ನಿರ್ಮಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕ್ಷೇತ್ರದ ಪ್ರತಿ ಗ್ರಾಮದ ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಮಾಡುವಲ್ಲಿ ರಾಯರಡ್ಡಿ ಶ್ರಮಿಸಿದ್ದಾರೆ.