ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲರಿಂದ ದೌರ್ಜನ್ಯ ಆರೋಪ

KannadaprabhaNewsNetwork |  
Published : Aug 04, 2026, 01:45 AM IST
ಎಬಿವಿಪಿ, ಕನ್ನಡ ಜಾಗೃತ ವೇದಿಕೆಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಲ್ಯಾಣ ಗ್ರಾಮದಲ್ಲಿರುವ ಜಿಟಿಟಿಸಿ ಕೇಂದ್ರದಲ್ಲಿ ಪ್ರಾಂಶುಪಾಲರಿಂದ ಹಾಗೂ ಅಟೆಂಡರ್‌ಗಳಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗೃತ ವೇದಿಕೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.

ಬಂಕಾಪುರ: ಕಲ್ಯಾಣ ಗ್ರಾಮದಲ್ಲಿರುವ ಜಿಟಿಟಿಸಿ ಕೇಂದ್ರದಲ್ಲಿ ಪ್ರಾಂಶುಪಾಲರಿಂದ ಹಾಗೂ ಅಟೆಂಡರ್‌ಗಳಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗೃತ ವೇದಿಕೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.

ಕಲ್ಯಾಣ ಗ್ರಾಮದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಇತ್ತೀಚೆಗೆ ಸೇರ್ಪಡೆಯಾದ ಪ್ರಾಂಶುಪಾಲರಿಂದ ಹಾಗೂ ಅಟೆಂಡರ್‌ಗಳಿಂದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗೃತ ವೇದಿಕೆ ಸಹಯೋಗದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಜಿಟಿಟಿಸಿ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಮೌಖಿಕವಾಗಿ ತಿಳಿಸಿ ಮನವಿಯನ್ನು ಸಲ್ಲಿಸಿದರೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ವೀಡಿಯೋ ಮಾಡಿ, ಇದರಿಂದ ಟಾರ್ಗೆಟ್ ಮಾಡುವುದು ಮತ್ತು ಪಾಲಕರಿಗೆ ಕಳುಹಿಸುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ, ಸದ್ಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ, ಸೆಮಿಸ್ಟರ್ ಪರೀಕ್ಷೆಗಳು ಇನ್ನು ಕೇವಲ ಮೂರೇ ತಿಂಗಳಿನ ಅಂತರದಲ್ಲಿದ್ದು ಬೋಧಕರ ಕೊರತೆ ಇರುವುದು, ಇದರಿಂದ ಇನ್ನೂ ಎರಡು ಮೂರು ವಿಷಯಗಳು ಇನ್ನೂ ಪ್ರಾರಂಭವಾಗದೇ ಇರುವುದು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿದೆ, ಪ್ರವೇಶಾತಿ ಪಡೆಯುವಾಗ ಶೇ. 70ರಷ್ಟು ಪ್ರಾಯೋಗಿಕ ತರಬೇತಿ ಎಂದು ಹೇಳಿದ್ದರು. ಆದರೆ ಈ ಸೆಮಿಸ್ಟರ್‌ಗೆ ಬೇಕಾದ ಯಂತ್ರೋಪಕರಣಗಳು ಇಲ್ಲ ಇದರಿಂದ ತಮ್ಮ ಭವಿಷ್ಯ ಕೌಶಲ್ಯಯುತವಾಗುವುದೇ? ಜೊತೆಗೆ ಇಂತಹ ತರಬೇತಿಯಿಂದ ಉದ್ಯೋಗ ಸಿಗುವುದೇ ಎಂಬ ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ಬಂದ ಉಪನ್ಯಾಸಕರ ಪಾಠಗಳು ಅರ್ಥವಾಗಲು ಕಷ್ಟವಾಗುತ್ತಿದೆ, ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ತಂದರೂ ಅವರು ವಿದ್ಯಾರ್ಥಿಗಳದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ, ಸುಮಾರು 25 ಸಾವಿರ ವಿದ್ಯಾರ್ಥಿ ವೇತನ ಬರುವುದಾಗಿ ಭರವಸೆ ನೀಡಿದ್ದರು, ಆದರೆ ಒಂದು ವರ್ಷ ಮೇಲಾದರೂ ಇನ್ನೂ ವಿದ್ಯಾರ್ಥಿ ವೇತನ ಬಂದಿಲ್ಲ ಎಂದು ಆರೋಪಿಸಲಾಗಿದೆ. ಯಾವುದಾದರೂ ಸಮಸ್ಯೆಯನ್ನು ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಹೇಳಲು ಹೊರಟರೆ " ಬ್ಯುಸಿ ಆಗಿದ್ದಾರೆ. ಮೀಟಿಂಗ್ ನಡೆಯಲಿದೆ. ನಾಳೆ ಬನ್ನಿ " ಎಂದು ನಿಷ್ಕಾಳಜಿ ಕಾರಣ ನೀಡಿ ತಡೆಹಿಡಿಯಲಾಗುತ್ತಿದೆ, ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲ, ಈ ಮೊದಲಿದ್ದ ಉಪನ್ಯಾಸಕರನ್ನ ಯಾವುದೇ ಋಣಾತ್ಮಕ ಕಾರಣಗಳಿಲ್ಲದಿದ್ದರೂ ಕೇಂದ್ರ ಕಚೇರಿಯ ಮೇಲೆ ಆಪಾದನೆ ಹಾಕಿ ಸೇವೆಯಿಂದ ತೆಗೆಯಲಾಗಿದೆ, ಇನ್ನು ಹಾಸ್ಟೆಲ್‌ನ ಕ್ಯಾಂಟೀನ್‌ನಲ್ಲಿ ಯಾವುದೇ ರೀತಿಯ ಸ್ವಚ್ಛತೆ ಇಲ್ಲದೇ ಹಾಗೇ ಊಟ ನೀಡುತ್ತಿರುವ ಕಾರಣ ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗುತ್ತಿದೆ, ಇದರಿಂದ ವಿದ್ಯಾಭ್ಯಾಸಕ್ಕೂ ಅಡಚಣೆಯಾಗುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಬಂದ ಉಪನ್ಯಾಸಕರು, ವಿದ್ಯಾರ್ಥಿಗಳ ಚಿಕ್ಕ ಚಿಕ್ಕ ತಪ್ಪಿಗೂ ಇನ್ನೂರು ಬಸ್ಕಿಗಳನ್ನು ಹೊಡೆಸಿ ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಸಮಸ್ಯೆಗೆ ಗುರಿ ಮಾಡುತ್ತಿದ್ದಾರೆ, ಈ ಎಲ್ಲ ಶೈಕ್ಷಣಿಕ ಸಮಸ್ಯೆಗಳನ್ನ ಪ್ರಾಂಶುಪಾಲರ ಬಳಿ ಹೇಳಲು ಹೋದರೆ ಅಟೆಂಡರ್‌ಗಳೇ ಇಲ್ಲಿ ಪ್ರಾಂಶುಪಾಲರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರಲ್ಲದೇ ಹೊಸದಾಗಿ ಬಂದ ಪ್ರಾಂಶುಪಾಲರು ಮತ್ತು ಅಟೆಂಡರ್‌ಗಳಿಂದ ಅಭಿವೃದ್ಧಿಗಿಂತ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೇ ಹೆಚ್ಚು ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಬಂಕಾಪುರ ಪಿಎಸ್‌ಐ ಶ್ರೀಶೈಲ್ ಕೆಂಚಣ್ಣವರ, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮ್ಮೂರ, ಕನ್ನಡ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಲಂಕೇಶ ಛಲವಾದಿ ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ ಹಡಪದ, ರಕ್ಷಿತ್ ಎಂ., ಗುರುರಾಜ, ವೀರೇಶ ಸೇರಿದಂತೆ ಜಿಟಿಟಿಸಿ ಕೇಂದ್ರದ ಎಲ್ಲ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭಿವೃದ್ಧಿ ಹರಿಕಾರ ರಾಯರಡ್ಡಿಗೆ ಮಂತ್ರಿಪಟ್ಟ
ಕೊಪ್ಪಳ ಜಿಲ್ಲೆಗೆ ಡಬಲ್ ಧಮಾಕಾ