ಬೃಹತ್ ಮಹಾನಗರ ಪಾಲಿಕೆಯಿಂದ ಅಭಿವೃದ್ಧಿ ಸಾಧ್ಯ

KannadaprabhaNewsNetwork |  
Published : May 03, 2026, 02:15 AM IST
ಈರೇಶ್ ಅಂಚಟಗೇರಿ | Kannada Prabha

ಸಾರಾಂಶ

ಬಹಳ ವರ್ಷಗಳಿಂದ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಾಗಿ ಬೆಳೆಯುತ್ತ ಬಂದಿವೆ. ಇದೀಗ ಇದ್ದಕ್ಕಿದ್ದಂತೆ ಪ್ರತ್ಯೇಕವಾದರೆ ಕೇಂದ್ರ ಸರ್ಕಾರದಿಂದ 16ನೇ ಹಣಕಾಸು ಆಯೋಗದ ಮೂಲಕ ಬರುವ ನೂರಾರು ಕೋಟಿ ರೂಪಾಯಿ ಅನುದಾನ ಹುಬ್ಬಳ್ಳಿ ಮತ್ತು ಧಾರವಾಡ ಎರಡೂ ನಗರಕ್ಕೆ ತಪ್ಪಿಹೋಗಲಿದೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇಲ್ಲವಾದರೆ ರಾಜ್ಯ ಸರ್ಕಾರ ಧಾರವಾಡಿಗರನ್ನು ಕತ್ತಲಲ್ಲಿ ಇಟ್ಟು ಅಭಿವೃದ್ಧಿಯಿಂದ ವಂಚಿತಗೊಳಿಸುತ್ತದೆ ಎಂದು ಹು-ಧಾ ಮಹಾನಗರ ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಾಗಿ ಬೆಳೆಯುತ್ತ ಬಂದಿವೆ. ಇದೀಗ ಇದ್ದಕ್ಕಿದ್ದಂತೆ ಪ್ರತ್ಯೇಕವಾದರೆ ಕೇಂದ್ರ ಸರ್ಕಾರದಿಂದ 16ನೇ ಹಣಕಾಸು ಆಯೋಗದ ಮೂಲಕ ಬರುವ ನೂರಾರು ಕೋಟಿ ರೂಪಾಯಿ ಅನುದಾನ ಹುಬ್ಬಳ್ಳಿ ಮತ್ತು ಧಾರವಾಡ ಎರಡೂ ನಗರಕ್ಕೆ ತಪ್ಪಿಹೋಗಲಿದೆ. ಬೃಹತ್ ಮಹಾನಗರ ಪಾಲಿಕೆ ರಚನೆಯಾದರೆ ಮಾತ್ರ ಕೇಂದ್ರದ ಅನುದಾನ ಲಭಿಸಲಿದೆ. ಹೀಗಾಗಿಯೇ ಏ. 30ರ ಸಾಮಾನ್ಯ ಸಭೆಯಲ್ಲಿ ಬೃಹತ್ ಮಹಾನಗರ ಪಾಲಿಕೆ ರಚನೆ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪಷ್ಪಪಡಿಸಿದರು.

ಪ್ರತ್ಯೇಕಕ್ಕೆ ರಾಜ್ಯ ನಿರ್ಲಕ್ಷ್ಯ:

ಸರ್ಕಾರ ಸಮ ಪ್ರಮಾಣದಲ್ಲಿ ಮಹಾನಗರ ವಿಂಗಡಿಸಿ (ಭೈರಿದೇವರ ಕೊಪ್ಪದವರೆಗೂ) ಪ್ರತ್ಯೇಕ ಮಾಡುವಾಗ ನಾವು ಠರಾವು ಪಾಸ್‌ ಮಾಡಲು ಒಪ್ಪಿದ್ದೆವು. ಆದರೆ, ಸರ್ಕಾರ ಮೂಗಿಗೆ ತುಪ್ಪ ಹಚ್ಚಿ ಕಡಿಮೆ ಪ್ರದೇಶದ ಮಹಾನಗರ ರಚಿಸಿತು. ಅಲ್ಲದೇ ಹುಡಾ, ಕಮಿಷನರೇಟ್ ಪ್ರತ್ಯೇಕವಾಗಿ ನೀಡದೇ ಒಂದೇ ಎಂದಿತು. ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವುದು ಇಷ್ಟವೇ ಇಲ್ಲ. ಹೀಗಾಗಿ ಬಹಳ ಹಿಂದೆಯೇ ನಾವು ಮತ್ತೆ ಬೃಹತ್ ಮಹಾನಗರ ಪಾಲಿಕೆಯೇ ಆಗಬೇಕು ಎಂದು ಠರಾವು ಕೂಡ ಪಾಸ್‌ ಮಾಡಿದ್ದೇವು. ಇದಕ್ಕೆ ಕಾಂಗ್ರೆಸ್ಸಿನವರೂ ಒಪ್ಪಿದ್ದರು ಎಂದು ಅಂಚಟಗೇರಿ ಹೇಳಿದರು.

ಕಡಿಮೆ ತೆರಿಗೆ ಸಂಗ್ರಹ:

ಧಾರವಾಡ ನಗರದಿಂದ ಅತ್ಯಂತ ಕಡಿಮೆ (₹40 ಕೋಟಿ) ತೆರಿಗೆ ಸಂಗ್ರಹವಾಗುತ್ತದೆ. ಆದರೂ ಅಭಿವೃದ್ಧಿಗೆ ವಾರ್ಡ್‌ವಾರು ಹೆಚ್ಚಿನ ಅನುದಾನ ಪಾಲಿಕೆಯಿಂದ ಲಭಿಸುತ್ತಿದೆ. ಹುಬ್ಬಳ್ಳಿಯಲ್ಲಿ ಹೆಚ್ಚು ವಾರ್ಡ್‌ಗಳಿವೆ. ಹೀಗಾಗಿ ಹೆಚ್ಚಿನ ಅನುದಾನ ಹೋಗಿದೆ. ಸ್ಮಾರ್ಟ್‌ಸಿಟಿಯೊಂದನ್ನು ಹೊರತುಪಡಿಸಿ ಎಲ್ಲಿಯೂ ಧಾರವಾಡಕ್ಕೆ ಅನ್ಯಾಯವಾಗಿಲ್ಲ. ಹೀಗಾಗಿ ಅಭಿವೃದ್ಧಿಯಾಗಬೇಕಾದರೆ ಬೃಹತ್ ಪಾಲಿಕೆಗೆ ಬೆಂಬಲಿಸಬೇಕು ಎಂದರು.ಮೈಸೂರಿಗಾಗಿ ಧಾರವಾಡ ಬಲಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರನ್ನು ಬೃಹತ್ ಮಹಾನಗರ ಪಾಲಿಕೆ ಮಾಡುವುದಕ್ಕಾಗಿ ಹುಬ್ಬಳ್ಳಿ-ಧಾರವಾಡದ ಮಧ್ಯೆ ಜಗಳ ಹಚ್ಚಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತೀ ದೊಡ್ಡ ಮಹಾನಗರ ಹುಬ್ಬಳ್ಳಿ-ಧಾರವಾಡ. ಇದು ಬೃಹತ್ ಮಹಾನಗರವಾದರೆ ಹೆಚ್ಚಿನ ಅನುದಾನ ಲಭಿಸುತ್ತಿತ್ತು. ಇದನ್ನು ತಪ್ಪಿಸಲು ಮಾಜಿ ಸಚಿವ ವಿನಯ ಕುಲಕರ್ಣಿ ಮೂಲಕ ತರಾತುರಿಯಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಿಸುವ ಆದೇಶ ಹೊರಡಿಸಿದ್ದಾರಷ್ಟೇ. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಇಷ್ಟೊತ್ತಿಗೆ ಪಾಲಿಕೆ ರಚಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿತ್ತು ಎಂದು ಅಂಚಟಗೇರಿ ಹೇಳಿದರು.ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದಾಗ ಶಾಸಕ ಅರವಿಂದ ಬೆಲ್ಲದ ಪೋಸ್ಟರ್ ಹಾಕಿಕೊಂಡಿದ್ದು ಅವರ ವೈಯಕ್ತಿಕ. ಆದರೆ, ನಾವು ಈಗ ಬೃಹತ್ ಮಹಾನಗರ ಪಾಲಿಕೆಗೆ ಬಿಜೆಪಿಯಿಂದಲೇ ಅಧೀಕೃತ ಬೆಂಬಲ ನೀಡಿದ್ದೇವೆ.

ಈರೇಶ್ ಅಂಚಟಗೇರಿ, ಪಾಲಿಕೆ, ಸಭಾ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸಂಘದ ಚುನಾವಣೆ: ಗೆಲುವು ಸಾಧಿಸಿದ ಕ್ರಿಯಾ ಸಮಿತಿ
ಅಂಕಗಳ ಜತೆಯಲ್ಲಿ ಕೌಶಲ್ಯಜ್ಞಾನವಿದ್ದರೆ ಯಶಸ್ಸು: ಶಾಸಕ ಪ್ರಕಾಶ ಕೋಳಿವಾಡ