ಹೂವಿನಹಡಗಲಿ: ಐತಿಹಾಸಿಕ ಪುಣ್ಯ ಕ್ಷೇತ್ರ ಕುರುವತ್ತಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು, ಹತ್ತಾರು ರೀತಿಯ ಹರಕೆ ತೀರಿಸಿ ದೇವರ ದರ್ಶನ ಪಡೆದು ಪುನೀತರಾದರು.
ಕೆಲ ಭಕ್ತರು ಸ್ವಾಮಿಗೆ ಗುಗ್ಗಳ ಸೇವೆಯನ್ನು ಸಂಭ್ರಮ, ಸಡಗರದಿಂದ ನೆರವೇರಿಸಿದರು. ಸಾವಿರಾರು ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಮಡಿ-ಯುಡಿಯಿಂದ ಮಾಡಿದ ಎಡೆಯನ್ನು ಸ್ವಾಮಿಗೆ ಅರ್ಪಣೆ ಮಾಡಿದರು. ರೈತರು ತಮ್ಮ ಜಮೀನುಗಳಲ್ಲಿ ಪುಣ್ಯ ಕ್ಷೇತ್ರದ ಪ್ರಸಾದವನ್ನು ಚರಗ ಚೆಲ್ಲಿದರೆ ತಮ್ಮ ಜಮೀನುಗಳು ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆ ಭಕ್ತರದ್ದು.
ಕಳೆದ ಬಾರಿ ಸಂಚಾರ ದಟ್ಟಣೆ ಉಂಟಾಗಿ ಸಿಕ್ಕಾಪಟ್ಟೆ ತೊಂದರೆ ಉಂಟಾಗಿತ್ತು. ಈ ಬಾರಿಯೂ ಜಾತ್ರೆಗೆ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲು ಪಣ ತೊಟ್ಟಿದ್ದ ಪೊಲೀಸ್ ಇಲಾಖೆ, ಸರಾಗವಾಗಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಜಾತ್ರೆಗೆ ಬಂದ ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದ ವಿಜಯನಗರ ಎಸ್ಪಿ ಜಾಹ್ನವಿ, ಡಿವೈಎಸ್ಪಿ ಸಂತೋಷ ಚೌವಾಣ್, ಸಿಪಿಐ ಮಲ್ಲಪ್ಪ ಸ್ಥಳದಲ್ಲೇ ಹಗಲು ರಾತ್ರಿ ಠಿಕಾಣಿ ಹೂಡಿ ಸೂಕ್ತ ಬಂದೋಬಸ್ತ್ ಮಾಡಿದರು.ಜಾತ್ರೆಯಲ್ಲಿ ಯಾವುದೇ ಸರಗಳ್ಳತನ, ಜೂಜಾಟ ಸೇರಿದಂತೆ ಎಲ್ಲ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಬಂದೋಬಸ್ತ್‌ಗೆ ಅನುಕೂಲವಾಗಲು ಸೂಕ್ತ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಜಾತ್ರೆಯಲ್ಲಿ ಕಳೆದುಕೊಂಡಿದ್ದ ನೂರಾರು ಮಕ್ಕಳನ್ನು ಅವರ ಪಾಲಕರಿಗೆ ಒಪ್ಪಿಸಲು ತೆರೆದಿದ್ದ ಸಹಾಯವಾಣಿ ಉತ್ತಮ ಕೆಲಸ ಮಾಡಿದೆ.
ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬಂದಿದ್ದ, ಭಕ್ತರ ನೂಕು ನುಗ್ಗಲು ತಪ್ಪಿಸಲು ಒಂದೇ ನೇರ ಮಾರ್ಗ ವ್ಯವಸ್ಥೆ ಮಾಡಿದ್ದರಿಂದ ಎಲ್ಲ ಭಕ್ತರು ಸಮಾಧಾನದಿಂದ ದರ್ಶನ ಪಡೆದು ಪುನೀತರಾದರು.