ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿಶೇಷವಾಗಿ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ದಿಕ್ಕನ್ನು ಬದಲಿಸುವ ಸಂಕ್ರಮಣದ ಪರ್ವಕಾಲದಲ್ಲಿ ಕುಟುಂಬ ಸಮೇತ ಆಗಮಿಸಿ ಕೃಷ್ಣಾ, ಮಲಪ್ರಭಾ ನದಿಯ ಸಂಗಮದಲ್ಲಿ ಮಿಂದು ಪುಣ್ಯ ಸ್ನಾನ ಮಾಡಿ ಸಂಕ್ರಮನದ ಪರ್ವಕಾಲವನ್ನು ಆಚರಿಸಿದರು.
ಪುಣ್ಯಸ್ನಾನದ ಬಳಿಕ ಭಕ್ತರು ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯಮಂಟಪ ದರ್ಶನ ಪಡೆದು ಭಕ್ತಿ ಮೆರೆದರು. ಪರಸ್ಪರ ಕುಸಿರೆಳ್ಳು ವಿನಿಯೋಗ ಮಾಡಿಕೊಂಡು ದೇವಾಲಯ ಒಳ ಹಾಗೂ ಹೊರ ಆವರಣ, ಉದ್ಯಾನದಲ್ಲಿ ತಂದ ಸಿಹಿ ತಿಂಡಿಗಳ ಭೋಜನ ಸವಿದು ಸಂಭ್ರಮಿಸಿದರು.ಕೆಲವು ಭಕ್ತರು ಪುಣ್ಯ ಸ್ನಾನಕ್ಕಾಗಿಯೇ ಬುಧವಾರ ರಾತ್ರಿಯೇ ಸುಕ್ಷೇತ್ರಕ್ಕೆ ಆಗಮಿಸಿದರೆ ಇನ್ನೂ ಕೆಲವು ಭಕ್ತರು ಬೆಳಗ್ಗೆ ಬಂದು ಸ್ನಾನ ಮಾಡಿದರು. ಬೆಳಗಿನ ಅವಧಿಯಲ್ಲಿ ಕಡಿಮೆ ಇದ್ದ ಭಕ್ತರ ಸಂಖ್ಯೆ 12 ಗಂಟೆಯ ನಂತರ ಅಧಿಕಗೊಂಡಿತು. ಸಂಗಮನಾಥನ ದರ್ಶನ ಪಡೆಯಲು ಭಕ್ತರು ಸರದಿಯ ಸಾಲಿನಲ್ಲಿ ನಿಂತರು.
ದೇಗುಲಕ್ಕೆ ಹೋಗಲು ಪರದಾಟ: ದ್ವಿಚಕ್ರವಾಹನಗಳು ದೇವಾಲಯ ಪ್ರವೇಶ ದ್ವಾರ, ಮಾಹಿತಿ ಕೇಂದ್ರದ ಮುಂದೆ ನಿಲ್ಲಿಸಿದ್ದರಿಂದ ದೇವಾಲಯಕ್ಕೆ ಭಕ್ತರು ಹೊಗಲು ತೊಂದರೆ ಅನುಭವಿಸಿದರು. ದೇವಾಲಯ ಮುಂಭಾಗ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿದ್ದರಿಂದ ದೇವಾಲಯಕ್ಕೆ ಹೊಗಲು ಭಕ್ತರು ತೊಂದರೆ ಅನುಭವಿಸಿದರು.
ಕಡ್ಲೆಹಿಟ್ಟಿನ ಪ್ಯಾಕೇಟ್ ಉಚಿತ ವಿತರಣೆ: ಹುಬ್ಬಳ್ಳಿ ವರದಶ್ರೀ ಫೌಂಡೇಶನ್ ಸಂಸ್ಥೆಯ ಸದಸ್ಯರು ಪುಣ್ಯಸ್ನಾನಕ್ಕೆ ಬರುವ ಭಕ್ತರಿಗೆ ಶಾಂಪೂ, ಸಾಬೂನು, ವಿಷಸ್ನಾನ ಬಿಡಿ, ಕಡ್ಲೆಹಿಟ್ಟಿನಿಂದ ವಿಷಮುಕ್ತ ಪುಣ್ಯಸ್ನಾನ ಮಾಡಿ ಎಂದು ತಿಳಿ ಹೇಳಿ ಕಡ್ಲೆಹಿಟ್ಟಿನ ಪ್ಯಾಕೇಟ್ ಉಚಿತವಾಗಿ ನೀಡಿದರು. ಮಕರ ಸಂಕ್ರಾಂತಿ ನಿಮಿತ್ಯ ಬೆಳಗ್ಗೆ 6 ಗಂಟೆಗೆ 100 ಜನ ಕಾರ್ಯಕರ್ತರು ಕೊರಳಲ್ಲಿ ಜಾಗೃತಿ ನಾಮಫಲ ಹಾಕಿಕೊಂಡು ಬರುವ ಭಕ್ತರಿಗೆ ಕಡ್ಲೆಹಿಟ್ಟಿನ ಪ್ಯಾಕೇಟ್ ನೀಡಿದರು.ವರದಶ್ರೀ ಫೌಂಡೇಶನ್ ಸದಸ್ಯ ಸಿದ್ದು ರಡ್ಡೆರ ಮಾತನಾಡಿ ರಾಜ್ಯದ 200 ಪುಣ್ಯಕ್ಷೇತ್ರದಲ್ಲಿ ಈ ಕಾರ್ಯ ಮಾಡುತ್ತಿದ್ದೆವೆ. ಮಕರ ಸಂಕ್ರಾಂತಿ ನಿಮಿತ್ಯ ಸುಕ್ಷೇತ್ರಕ್ಕೆ ಅಧಿಕ ಭಕ್ತರು ಬರುತ್ತಿರುವುದರಿಂದ 100 ಜನ ಬಂದಿದ್ದೆವೆ. ಉಚಿತವಾಗಿ ಕಡ್ಲೆಹಿಟ್ಟಿನ ಪ್ಯಾಕೇಟ್ ಎಲ್ಲರಿಗೂ ನೀಡುತ್ತಿದ್ದೆವೆ. ಈ ವರ್ಷ 25 ಲಕ್ಷ ಪ್ಯಾಕೇಟ್ ನೀಡಲು ತಯಾರಿಸಿದ್ದೆವೆ ಎಂದರು.