ಕನ್ನಡಪ್ರಭ ವಾರ್ತೆ ಸೊರಬ
ಸಮಾಜದಲ್ಲಿ ಜಾತಿ- ಮತ, ಧರ್ಮವನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸಿ, ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಂತಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಜಡೆ ವಲಯದ ಶಾಂತಪುರ ಮಠದಲ್ಲಿ ಹಮ್ಮಿಕೊಂಡಿದ್ದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗ್ರಾಮೀಣಮಟ್ಟದ ಜನರು ಯೋಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಅಭಿವೃದ್ಧಿಯನ್ನು ಹೊಂದಬೇಕು. ಗ್ರಾಮೀಣಮಟ್ಟದ ಜನರ ಅಭಿವೃದ್ಧಿಗೆ ದಾರಿ ಸೃಷ್ಟಿಸುವ ಮೂಲಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ದಂಪತಿ ಸಮಾಜದಲ್ಲಿ ಹಿಂದುಳಿದ ಜನರ ಬಾಳಿಗೆ ದಾರಿ ದೀಪವಾಗುತ್ತಿದ್ದಾರೆ ಎಂದರು.ಮುಖ್ಯ ಅತಿಥಿ, ಶಕುನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಡಿ.ಜೆ. ಪಾಟೀಲ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರನ್ನು ಸಂಘಟಿಸಿ ಆರ್ಥಿಕವಾಗಿ ಅಭಿವೃದ್ಧಿ ಮಾಡುವುದರ ಜೊತೆಗೆ ಜನರಲ್ಲಿ ವೈಯಕ್ತಿಕ ಸ್ವಚ್ಛತೆ, ಸುತ್ತಲಿನ ಪರಿಸರದ ಸ್ವಚ್ಛತೆ ಜೊತೆಗೆ ಉತ್ತಮ ಆರೋಗ್ಯದ ಅರಿವನ್ನು ಸಮಾಜದಲ್ಲಿ ಮೂಡಿಸುತ್ತಿದೆ. ಮದ್ಯಪಾನದಂತಹ ಮಾರಕ ಕಾಯಿಲೆಗಳ ನಿರ್ಮೂಲನೆಗೆ ತನ್ನದೇ ಆದ ಮಾರ್ಗದಲ್ಲಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ ಎಂದರು.
ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ಅವರು ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಯೋಜನೆಯ ಜನಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಶಕುನವಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಶಾಂತಮ್ಮ ಅಧ್ಯಕ್ಷತೆ ವಹಿಸಿದ್ದರು. ಜಡೆ ಗ್ರಾಪಂ ಸದಸ್ಯೆ ಶೋಭಾ ಮಂಜುನಾಥ, ತಲಗಡ್ಡೆ ಗ್ರಾಪಂ ಸದಸ್ಯೆ ಹೇಮಾವತಿ, ವಲಯ ಮೇಲ್ವಿಚಾರಕ ರಾಜಪ್ಪ ಸೇರಿದಂತೆ ಒಕ್ಕೂಟಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
- - - -21ಕೆಪಿಸೊರಬ01:ಸೊರಬ ತಾಲೂಕಿನ ಜಡೆ ವಲಯದ ಶಾಂತಪುರ ಮಠದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮವನ್ನು ಶಾಂತಪುರ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯರು ಉದ್ಘಾಟಿಸಿದರು.