ಪುತ್ತೂರಿನಲ್ಲಿ ವಿಶೇಷ ಪೂಜೆ, ದೀಪಾಲಂಕಾರದೊಂದಿಗೆ ಆಚರಣೆಗೆ ಸಿದ್ದತೆ

KannadaprabhaNewsNetwork | Published : Jan 22, 2024 2:15 AM

ಸಾರಾಂಶ

ಪುತ್ತೂರು ನಗರದ ಪ್ರಮುಖ ಎರಡು ದೇವಾಲಯಗಳಾದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಬೆಳಗ್ಗಿನಿಂದ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರಾಮತಾರಕ ಯಜ್ಞದ ಪೂರ್ಣಾಹುತಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರುಅಯೋಧ್ಯೆಯಲ್ಲಿ ಸೋಮವಾರ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ವಿವಿಧ ದೇವಾಲಯಗಳು, ಭಜನಾಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಅದರೊಂದಿಗೆ ಮನೆಮನೆಗಳಲ್ಲಿ ಭಗವಾಧ್ವಜ ಸಹಿತ ದೀಪಾಲಂಕಾರ ನಡೆಸಲಾಗುತ್ತಿದೆ.

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆಯು ನಡೆಯುವ ಸಂದರ್ಭದಲ್ಲಿ ಪೂರ್ವಾಹ್ನ ೧೧ ಗಂಟೆಯಿಂದ ೧.೩೦ ಗಂಟೆಯವರೆಗೆ ಎಲ್ಲಾ ಹಿಂದೂಗಳು ತಮ್ಮ ವ್ಯವಹಾರ, ವಹಿವಾಟುಗಳಿಗೆ ಬಿಡುವು ನೀಡಿ ಸ್ಥಳೀಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕು. ರಾತ್ರಿ ಮನೆಗಳಲ್ಲಿ ೨ನೇ ದೀಪಾವಳಿಯಂತೆ ದೀಪಾಲಂಕಾರ ಮಾಡುವಂತೆ ಹಾಗೂ ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ವಾಹನಗಳಲ್ಲಿ, ಕಚೇರಿಗಳಲ್ಲಿ ಅಂದು ಬೆಳಗ್ಗಿನಿಂದಲೇ ಭಗವಧ್ವಜವನ್ನು ಅಳವಡಿಸಿಕೊಂಡು ಶ್ರೀರಾಮ ಭಾವಚಿತ್ರವನ್ನಿರಿಸಿ ಪೂಜಿಸುವಂತೆ ಹಾಗೂ ಉತ್ತರಾಭಿಮುಖವಾಗಿ ಅಯೋಧ್ಯೆಯ ದಿಕ್ಕಿನಲ್ಲಿ ಆರತಿ ಬೆಳಗಿಸುವಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳವು ವಿನಂತಿ ಮಾಡಿತ್ತು. ಅದರಂತೆ ಎಲ್ಲೆಡೆ ತಯಾರಿಗಳು ನಡೆಯುತ್ತಿದೆ.

ಪುತ್ತೂರು ನಗರದ ಪ್ರಮುಖ ಎರಡು ದೇವಾಲಯಗಳಾದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಬೆಳಗ್ಗಿನಿಂದ ಶ್ರೀರಾಮ ಪಟ್ಟಾಭಿಷೇಕ ನಡೆಯಲಿದೆ. ಬೆಳಗ್ಗೆ ೧೧.೩೦ಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ರಾಮತಾರಕ ಯಜ್ಞದ ಪೂರ್ಣಾಹುತಿ ನಡೆಯಲಿದೆ. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಹಿನ್ನಲೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಹಮ್ಮಿಕೊಂಡಿರುವ ಶ್ರೀರಾಮಾಶ್ವಯಾತ್ರೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ.

ಶ್ರೀರಾಮನ ಸೇವೆಗಾಗಿ ವ್ಯಾಪಾರ ಸ್ಥಗಿತ:

ನಗರದ ಪುತ್ತೂರು ಸೆಂಟರ್‌ನ ವ್ಯಾಪಾರಸ್ಥರು ‘ಶ್ರೀರಾಮನ ಸೇವೆಗಾಗಿ ವ್ಯವಹಾರ ಸ್ಥಗಿತ’ ಎಂಬ ಬ್ಯಾನರ್ ಅಳವಡಿಸಿ ತಮ್ಮ ವ್ಯವಹಾರ ಸ್ಥಗಿತಗೊಳಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ದಿನದಂದು ವ್ಯಾಪಾರ ಸ್ಥಗಿತಗೊಳಿಸಿ ಶ್ರೀರಾಮ ಚಂದ್ರನ ಪೂಜಾ ಕೈಂಕರ್ಯದಲ್ಲಿ ಭಾಗವಹಿಸುತ್ತೇವೆ ಎಂದು ಪುತ್ತೂರು ಸೆಂಟರ್‌ನ ವ್ಯಾಪಾರಸ್ಥರು ತಿಳಿಸಿದ್ದಾರೆ.

Share this article