ಕನ್ನಡಪ್ರಭವಾರ್ತೆ ತಿಪಟೂರು
ಸಾರ್ವಜನಿಕರಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವ ದೃಷ್ಟಿಯಿಂದ ಹಾಗೂ ಜೀವ ಜಲ ನೀರಿನ ಸದ್ಬಳಕೆಯ ಬಗ್ಗೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಡಲಾಗುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಕೆ. ಉದಯ್ ತಿಳಿಸಿದರು.ನಗರದ ಕಸಬಾ ವಲಯದ ಬಸವೇಶ್ವರ ನಗರದ ಅಮೃತ ವರ್ಷಿಣಿ ಹಾಗೂ ಪುಣ್ಯಕೋಟಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆಯೋಜಿಸಿದ್ದ ಬೀದಿ ನಾಟಕ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವೃದ್ದಿ ಯೋಜನೆಯು ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢಗೊಳಿಸುವ ಜೊತೆಗೆ ಆರೋಗ್ಯ, ಶಿಕ್ಷಣ, ನೀರಿನ ಬಳಕೆ, ಶೌಚಾಲಯ ಸ್ವಚ್ಛತೆ, ಕೃಷಿ ಚಟುವಟಿಕೆ, ಕಾನೂನು ಅರಿವು ಸೇರಿದಂತೆ ವಿವಿಧ ಸಾಮಾಜಿಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಹಿಳೆಯರನ್ನು ಸದೃಢವಾಗಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಅಮ್ಮವರ ಆಶಯದಂತೆ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳನ್ನು ತೆರೆದು ಆ ಮೂಲಕ ಜನಮಂಗಳ, ಸುಜ್ಞಾನನಿಧಿ ಶಿಷ್ಯ ವೇತನ, ವಾತ್ಸಲ್ಯ, ಮದ್ಯವರ್ಜನ ಶಿಬಿರ, ಶೀ ಲೀಡ್ ಆಫ್ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಮಹಿಳೆಯರ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದರು. ನಿವೃತ್ತ ಶಿಕ್ಷಕ ಶ್ಯಾಮಸುಂದರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಪರಿಸರವನ್ನು ಕಾಪಾಡಿಕೊಳ್ಳುವ ಜೊತೆಗೆ ನೀರಿನ ಮಹತ್ವ ಅರಿಯದಿದ್ದರೆ ಮುಂದಿನ ದಿನಗಳಲ್ಲಿ ನೀರಿಗೆ ತೀವ್ರ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ನೀರಿನ ಮಿತಬಳಕೆ, ಪರಿಸರ ಕಾಪಾಡುವ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆಯು ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ದಾವಣಗೆರೆಯ ಶೃತಿ ಕಲಾ ತಂಡದ ಡಿ.ವೆಂಕಟೇಶ್ ಮತ್ತು ತಂಡವರು ನೀರಿನ ಸಂರಕ್ಷಣೆ, ಕೃಷಿ ಚಟುವಟಿಕೆ, ಕಾರ್ಯಕ್ರಮಗಳ ಕುರಿತು ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಆರ್ಥಿಕ ಸಾಕ್ಷರತೆ ಕೇಂದ್ರದ ಆಪ್ತ ಸಮಾಲೋಚಕಿ ಕುಸುಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಮೇಲ್ವಿಚಾರಕ ಜಯಪ್ರಸಾದ್, ಸೇವಾಪ್ರತಿನಿಧಿ ಶತಾಜ್‌ಬಾನು, ನಳಿನಾ, ನಾಗಲಕ್ಷ್ಮಮ್ಮ ಸೇರಿದಂತೆ ಕೇಂದ್ರಗಳ ಸದಸ್ಯರು, ಗ್ರಾಮಸ್ಥರು, ಶಾಲಾ ಮಕ್ಕಳು ಭಾಗವಹಿಸಿದ್ದರು.