ಪಂಚಮಸಾಲಿ ಶ್ರೀಗಳಿಂದ ಧರಣಿ ಸತ್ಯಾಗ್ರಹ ಆರಂಭ

KannadaprabhaNewsNetwork | Published : Dec 17, 2024 1:03 AM

ಸಾರಾಂಶ

ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಜಾರ್ಚ್‌ ಮಾಡಿರುವ ಘಟನೆ ಖಂಡಿಸಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಲು ಉದ್ದೇಶಿಸಿದ್ದ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳ ನೇತೃತ್ವದಲ್ಲಿ ಸೋಮವಾರ ಪಂಚಮಸಾಲಿ ಹೋರಾಟಗಾರರು ಗಾಂಧಿ ಭವನದಿಂದ ನಗರದ ಚನ್ನಮ್ಮ ವೃತ್ತದವರೆಗೆ ಸಾಂಕೇತಿಕವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶ್ರೀಗಳು ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕಾಡಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಮರಳಿ ಗಾಂಧಿ ಭವನಕ್ಕೆ ತೆರಳಿದ ಶ್ರೀಗಳು ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ಅನುಮತಿ ಸಿಕ್ಕಬಳಿಕ ಧರಣಿ:

ಅನುಮತಿ ಸಿಕ್ಕ ಬಳಿಕ ಡಿ.17ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಕೊಡುವುದಿಲ್ಲ ಎಂದು ಹೇಳಿದ, ನಂಬಿಕೆ ದ್ರೋಹ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆ ತೀವ್ರ ಖಂಡನೀಯ. ಪಂಚಮಸಾಲಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಹೇಳಿದ ಮುಖ್ಯಮಂತ್ರಿ ಕೂಡಲೇ ಕ್ಷಮೆ ಕೇಳಬೇಕು. ನಮ್ಮ ಸಮಾಜದವರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ಪಂಚಮಸಾಲಿ ಮೀಸಲಾತಿ ಕೇಳುವುದು ಸಂವಿಧಾನಕ್ಕೆ ವಿರುದ್ಧ ಎಂಬ ಹೇಳಿಕೆಯನ್ನು ವಾಪಸ್ ಪಡೆದು, ಕಡತದಿಂದ ಅದನ್ನು ನಿರ್ಮೂಲನೆ ಮಾಡಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದೆ.

-ಬಸವ ಜಯ ಮೃತ್ಯುಂಜಯ ಸ್ವಾಮೀಜಿ,

ಕೂಡಲಸಂಗಮ.

Share this article