ಹೊನ್ನಾವರ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಅಲ್ಲದೇ ಕನ್ನಡ ಮಾಧ್ಯಮ ಎಂದರೆ ಕಡೆಗಣಿಸಬಾರದು. ಇದು ಬಹಳ ಪಾಂಡಿತ್ಯ ಇರುವ, ಇತಿಹಾಸದ ಹಿನ್ನೆಲೆ ಇರುವ ಭಾಷೆಯಾಗಿದೆ ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ರವಿ ಎಂ. ನಾಯ್ಕ ತಿಳಿಸಿದರು.
ವಿಶ್ರಾಂತ ಪ್ರಾಚಾರ್ಯ ವಿ.ಐ. ನಾಯ್ಕ ಮಾತನಾಡಿ, ಯಜ್ಞ- ಯಾಗ ಮಾಡುವುದರಿಂದ ಮನುಷ್ಯನಲ್ಲಿನ ಅಂತಃಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯಕರ ಪ್ರಯೋಜನದ ಜತೆಗೆ ಪರಿಸರವು ಶುದ್ಧವಾಗುತ್ತದೆ ಎಂದರು.
ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ, ಇಂದು ದೇವರು, ಧರ್ಮ ನಮ್ಮಲ್ಲಿ ಜ್ಞಾನ, ಪ್ರಜ್ಞೆ ಮೂಡಿಸುವ ಬದಲಾಗಿ ಇನ್ನಷ್ಟು ಮೌಢ್ಯಕ್ಕೆ ಕೊಂಡೊಯ್ಯುತ್ತಿದೆ. ನಾವು ಮಾತೃ ಮೂಲ ಸಂಸ್ಕೃತಿಯಿಂದ ಬಂದವರು. ಭಕ್ತಿ, ಜ್ಞಾನ, ದೇವರು ಇವುಗಳ ಬಗ್ಗೆ ವೈಚಾರಿಕವಾಗಿ ಆಲೋಚನೆ ಮಾಡಬೇಕು. ದೇವರು ಸತ್ಯ, ಧರ್ಮವೂ ಸತ್ಯ. ಆದರೆ ಅವುಗಳ ಹಿಂದಿರುವ ತಿಳಿವಳಿಕೆ ವೈಚಾರಿಕವಾಗಿ, ವೈಜ್ಞಾನಿಕ ಆಲೋಚನೆ ಮಾಡಬೇಕಾಗುತ್ತದೆ ಎಂದರು.ವಿವಿಧ ಕ್ಷೇತ್ರದದಲ್ಲಿ ಸೇವೆ ಸಲ್ಲಿಸಿದ ದಾಮೋದರ ನಾಯ್ಕ, ಸುಪ್ರಿತಾ ಆಚಾರ್ಯ, ಗೋವಿಂದ ನಾಯ್ಕ, ಭಾಸ್ಕರ ನಾಯ್ಕ, ಲಕ್ಷ್ಮಣ ನಾಯ್ಕ, ಗಣಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು.
ಧಾರ್ಮಿಕ ಕಾರ್ಯಕ್ರಮ: ಡಿ. 13ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಪುಣ್ಯಾಹ, ಬ್ರಹ್ಮಕುರ್ಚಾಹವನ, ಗಣಹವನ, ಅಧಿವಾಸ ಹೋಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಡಿ. 14ರಂದು ಬೆಳಗ್ಗೆ ಶಾಂತಿ ಹೋಮ, ಕಲಶಾಭಿಷೇಕ, ಸಾಮೂಹಿಕ ಸತ್ಯನಾರಾಯಣ ವ್ರತ, ನವಚಂಡಿಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ನೆರವೇರಿಸಲಾಯಿತು.