ಧರ್ಮಸ್ಥಳದಲ್ಲಿ ಸಾಮೂಹಿಕ ಕೊಲೆ ಆರೋಪ ಆಧಾರರಹಿತ: ಡಾ। ಹೆಗ್ಗಡೆ

KannadaprabhaNewsNetwork |  
Published : Aug 20, 2025, 01:30 AM IST
ಡಾ। ಡಿ. ವೀರೇಂದ್ರ ಹೆಗ್ಗಡೆ | Kannada Prabha

ಸಾರಾಂಶ

ಕಳೆದ 2 ದಶಕಗಳಿಂದ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ಸೇರಿದಂತೆ ಹಲವು ಕೊಲೆ, ಅತ್ಯಾಚಾರ, ಶವಗಳ ಹೂಳುವಿಕೆಯ ಬಗ್ಗೆ ಮಾಡಲಾಗುತ್ತಿರುವ ಆರೋಪಗಳನ್ನು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಳ್ಳಿಹಾಕಿದ್ದು, ‘ಅವುಗಳು ಸುಳ್ಳು ಮತ್ತು ಆಧಾರರಹಿತ’ ಎಂದು ಹೇಳಿದ್ದಾರೆ. ಜತೆಗೆ, ಸತ್ಯವನ್ನು ಬೆಳಗಿಕೆ ತರುವ ಸಲುವಾಗಿ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.

- ಕೊಲೆ, ಅತ್ಯಾಚಾರ, ನೂರಾರು ಶವ ಹೂತ ಆರೋಪ ಕೇಳಿ ಬಂದ ನಂತರ ಮೊದಲ ಬಾರಿ ಮೌನ ಮುರಿದ ಧರ್ಮಾಧಿಕಾರಿ

- ಪುಣ್ಯಕ್ಷೇತ್ರವೆಂದು ಭಕ್ತರು ಶವ ಹೂಳಲು ಬರ್ತಾರೆ । ಕೊಲೆಗಳು ಆಗಿಲ್ಲ । ಷಡ್ಯಂತ್ರ ಯಾರದೆಂದು ಗೊತ್ತು. ಸಾಕ್ಷ್ಯ ಇಲ್ಲದ ಕಾರಣ ಹೇಳ್ತಿಲ್ಲ

----

ಡಾ। ವೀರೇಂದ್ರ ಹೆಗ್ಗಡೆ ಹೇಳಿದ್ದೇನು?

ಸೌಜನ್ಯ ಪ್ರಕರಣ ಸೇರಿ, ಹಲವು ಹತ್ಯೆ, ಅತ್ಯಾಚಾರ, ಸಮಾಧಿ ಆರೋಪ ಸುಳ್ಳು

ನಮ್ಮ ಒಳ್ಳೆಯ ಕೆಲಸಗಳಿಂದ ಬೇಸತ್ತು ಇಂಥ ಅಪಪ್ರಚಾರ ನಡೆಸಲಾಗುತ್ತಿದೆ

ಧರ್ಮಸ್ಥಳ ವಿರುದ್ಧ 14 ವರ್ಷದ ಸಂಘಟಿತ ಅಭಿಯಾನ,. ನಾವು ವಿಚಲಿತರಾಗಿಲ್ಲ

ಹೀಗಾಗಿಯೇ ಎಸ್‌ಐಟಿ ತನಿಖೆ ಸ್ವಾಗತಿಸಿದ್ದೇವೆ, ಈ ಬಗ್ಗೆ ತ್ವರಿತ ತನಿಖೆ ಅಗತ್ಯ

ಒಮ್ಮೆ ಆರೋಪದ ಪೂರ್ಣ ತನಿಖೆ ನಡೆದು ಎಲ್ಲಾ ಸತ್ಯವೂ ಬಯಸಲಾಗಬೇಕು

ಧರ್ಮಸ್ಥಳದಲ್ಲಿ ಸಾವನ್ನಪ್ಪಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ

ಭಕ್ತರ ಸಾವಾದಾಗ ಪಂಚಾಯ್ತಿಗೆ ಮಾಹಿತಿ ನೀಡುತ್ತಿದ್ದೆವು, ಶವ ಸಂಸ್ಕಾರ ಆಗ್ತಿತ್ತು

ಪ್ರಕರಣ ಕುರಿತ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ನಮ್ಮ ಬೆಂಬಲವಿದೆ

- ನಮ್ಮ ಕುಟುಂಬ ಅತ್ಯಲ್ಪ ಆಸ್ತಿ ಹೊಂದಿದೆ, ಅವವುಗಳನ್ನು ಟ್ರಸ್ಟ್‌ ನೋಡಿಕೊಳ್ಳುತ್ತೆ

- ಜೈನರಾಗಿ ಹಿಂದೂ ದೇಗುಲ ನಿರ್ವಹಣೆಯಲ್ಲಿ ತಪ್ಪಿಲ್ಲ, ಹಲವೆಡೆ ಇದೇ ಪದ್ಧತಿ ಇದೆ

==

ಪಿಟಿಐ ಬೆಂಗಳೂರು

ಕಳೆದ 2 ದಶಕಗಳಿಂದ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ಸೇರಿದಂತೆ ಹಲವು ಕೊಲೆ, ಅತ್ಯಾಚಾರ, ಶವಗಳ ಹೂಳುವಿಕೆಯ ಬಗ್ಗೆ ಮಾಡಲಾಗುತ್ತಿರುವ ಆರೋಪಗಳನ್ನು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಳ್ಳಿಹಾಕಿದ್ದು, ‘ಅವುಗಳು ಸುಳ್ಳು ಮತ್ತು ಆಧಾರರಹಿತ’ ಎಂದು ಹೇಳಿದ್ದಾರೆ. ಜತೆಗೆ, ಸತ್ಯವನ್ನು ಬೆಳಗಿಕೆ ತರುವ ಸಲುವಾಗಿ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿರುವ ವೀರೇಂದ್ರ ಹೆಗ್ಗಡೆ, ‘ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಇಂಥ ಆರೋಪಗಳಿಂದ ನಾನು ಬಹಳ ನೊಂದಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು. ಈ ಕಾರಣಕ್ಕಾಗಿಯೇ ಎಸ್‌ಐಟಿ ರಚನೆ ಕುರಿತ ಸರ್ಕಾರದ ನಿರ್ಧಾರವನ್ನು ನಾವು ಅಂದೇ ಸ್ವಾಗತಿಸಿದ್ದೆವು. ಅದನ್ನು ರಚಿಸಿದ್ದು ಒಳ್ಳೆಯದು. ಸತ್ಯವು ಒಮ್ಮೆಗೇ ಹೊರಬರಬೇಕು. ಆರೋಪಗಳನ್ನು ಮಾಡಿ, ಅವು ಹಾಗೆಯೇ ಉಳಿಯುವುದು ಒಳ್ಳೆಯದಲ್ಲ. ಹೀಗಾಗಿ ಆರೋಪಗಳ ಕುರಿತು ತ್ವರಿತವಾಗಿ ತನಿಖೆ ನಡೆಸಬೇಕಿದೆ’ ಎಂದು ಮನವಿ ಮಾಡಿದರು.‘ತನಿಖೆಗಳು ಆದಷ್ಟು ಬೇಗ ಮುಕ್ತಾಯಗೊಂಡು ಸಮಸ್ಯೆ ಬಗೆಹರಿಯಬೇಕೆಂದು ನಾವು ಬಯಸುತ್ತೇವೆ. ನಮ್ಮ ಎಲ್ಲಾ ದಾಖಲೆಗಳು ಹಾಗೂ ವಿಶೇಷವಾಗಿ ನಾವು ಎಲ್ಲದಕ್ಕೂ ತೆರೆದುಕೊಂಡಿದ್ದೇವೆ. ಎಸ್‌ಐಟಿ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಹೆಗ್ಗಡೆ ಹೇಳಿದರು.

ಇದೇ ವೇಳೆ, ‘ಧರ್ಮಸ್ಥಳ ಮತ್ತು ಅದರ ಮೇಲಿರುವ ನಂಬಿಕೆಯನ್ನು ಗುರಿಯಾಗಿಸಿ ಕಳೆದ 14 ವರ್ಷಗಳಿಂದ ಸಂಘಟಿತ ಅಭಿಯಾನ ನಡೆಯುತ್ತಿದೆ’ ಎಂದು ಆರೋಪಿಸಿದ ಅವರು, ‘ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳಿಂದ ಬೇಸತ್ತ ಕೆಲವು ಶಕ್ತಿಗಳು ಸುಳ್ಳು ಪ್ರಚಾರಗಳನ್ನು ನಡೆಸುತ್ತವೆ. ಆದರೆ ನಾವು ವಿಚಲಿತರಾಗಿರುವುದಿಲ್ಲ’ ಎಂದರು.

ಕೊಲೆ ಆರೋಪ ಸುಳ್ಳು:

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವುದಾಗಿ ಹೇಳಿರುವ ಮುಸುಕುಧಾರಿ ವ್ಯಕ್ತಿಯ ವಿಡಿಯೋವನ್ನು ಉಲ್ಲೇಖಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ, ‘ಇದು ಅಸಾಧ್ಯ. ಧರ್ಮಸ್ಥಳದಲ್ಲಿ ಸಾವನ್ನಪ್ಪಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಸಾವು ಸಂಭವಿಸಿದಾಗಲೆಲ್ಲಾ ನಾವು ಪಂಚಾಯಿತಿಗೆ ಮಾಹಿತಿ ನೀಡುತ್ತಿದ್ದೆವು ಮತ್ತು ಅವರು ಶವವನ್ನು ಹೂಳುತ್ತಿದ್ದರು’ ಎಂದರು.

ಸೋಷಿಯಲ್‌ ಮೀಡಿಯಾ ಬಗ್ಗೆ ಬೇಸರ:

ಸಾಮಾಜಿಕ ಮಾಧ್ಯಮಗಳು ಯುವ ಮನಸ್ಸುಗಳನ್ನು ಕಲುಷಿತಗೊಳಿಸಿವೆ ಎಂದು ಕಳವಳ ವ್ಯಕ್ತಪಡಿಸಿದ ಧರ್ಮಾಧಿಕಾರಿಗಳು, ‘ಯುವಕರು ನಂಬಿಕೆಯಿಂದ ದೂರ ಸರಿಯಬೇಕೆಂದು ಅವರು ಬಯಸುತ್ತಿದ್ದಾರೆ. ವಿಷಯಗಳನ್ನು ಚಿತ್ರಿಸಿಲಾಗುತ್ತಿರುವ ರೀತಿ ನಮಗೆ ಆಘಾತ ಮತ್ತು ಆಶ್ಚರ್ಯ ತಂದಿದೆ. ಸಾಮಾಜಿಕ ಮಾಧ್ಯಮವು ಅತ್ಯಂತ ಶಕ್ತಿಶಾಲಿಯಾಗಿದೆ. ನಮ್ಮ ಅನೇಕ ಹಿತೈಷಿಗಳು ಒಳ್ಳೆಯ ಕೆಲಸವನ್ನು ಪ್ರಚಾರ ಮಾಡಲು ನಾವು ಸಾಮಾಜಿಕ ಮಾಧ್ಯಮವನ್ನು ಬಳಸಿಲ್ಲ ಎಂದು ಹೇಳುತ್ತಾರೆ. ಸಮಾಜದಲ್ಲಿ ನಡೆಸುವ ಕೆಲಸ ನಮ್ಮ ಕರ್ತವ್ಯವು ಬದ್ಧತೆ ಮತ್ತು ಸೇವೆಯಾಗಿದೆ. ನಾವು ಎಲ್ಲಾ ಹಳ್ಳಿಗಳನ್ನು ತಲುಪಿದ್ದೇವೆ ಮತ್ತು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ 55 ಲಕ್ಷ ಕುಟುಂಬಗಳನ್ನು ಮುಟ್ಟಿದ್ದೇವೆ’ ಎಂದರು.

ಸೌಜನ್ಯಾಳಿಗೆ ನ್ಯಾಯಕ್ಕಾಗಿ ಆಗ್ರಹಗಳು ಮತ್ತೆ ಮುನ್ನೆಲೆಗೆ ಬಂದಿರುವ ಬಗ್ಗೆ ಮಾತನಾಡಿದ ಹೆಗ್ಗಡೆ, ‘ಅಂತಹ ಘಟನೆ ನಡೆದಿದೆ ಎಂದು ನಮಗೆ ತಿಳಿಯುತ್ತಿದ್ದಂತೆ ಸರ್ಕಾರಕ್ಕೆ ಅದನ್ನು ಅದೇ ದಿನ ತಿಳಿಸಿದೆವು. ನಮ್ಮ ಕುಟುಂಬದ ಮೇಲಿನ ಆರೋಪಗಳು ಆಧಾರರಹಿತ. ಯಾರ ಮೇಲೆ ಕೃತ್ಯದ ಆರೋಪ ಹೊರಿಸಲಾಗುತ್ತಿದೆಯೋ, ಅವರು ಆ ಸಮಯದಲ್ಲಿ ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿದ್ದೇವೆ. ಇವು ದುಷ್ಟ ಪ್ರಚಾರಗಳು’ ಎಂದು ಕಿಡಿ ಕಾರಿದರು. ‘ಈ ಮೊದಲು ನಡೆದ ಸಿಬಿಐ ವಿಚಾರಣೆಗೂ ನಾವು ಸಹಕರಿಸಿದ್ದೆವು ಮತ್ತು ಎಲ್ಲಾ ರೀತಿಯ ತನಿಖೆಗಳನ್ನು ಸ್ವಾಗತಿಸುತ್ತೇವೆ’ ಎಂದರು.

ಆಸ್ತಿ ಕಬಳಿಸಿಲ್ಲ:

ಇದೇ ವೇಳೆ ಆಸ್ತಿ ದುರ್ಬಳಕೆ ಆರೋಪವನ್ನು ತಿರಸ್ಕರಿಸಿದ ಹೆಗ್ಗಡೆ, ‘ನಮ್ಮ ಪರಿವಾರ ಅತ್ಯಲ್ಪ ಆಸ್ತಿಯನ್ನು ಹೊಂದಿದೆ. ಅವುಗಳನ್ನು ದಾಖಲೆ ಸಮೇತ ಟ್ರಸ್ಟ್‌ ನೋಡಿಕೊಳ್ಳುತ್ತದೆ. ಆಸ್ತಿ ಸ್ವಾಧೀನದ ಬಗ್ಗೆಯೂ ದಾಖಲೆ ಪುರಾವೆಗಳಿವೆ. ಟ್ರಸ್ಟ್‌ ಅನ್ನು ನಮ್ಮ ಪರಿವಾರದ ಸದಸ್ಯರು ಪಾರದರ್ಶಕವಾಗಿ ನಿರ್ವಹಿಸುತ್ತಿದ್ದಾರೆ. ನಾವು ನಾಲ್ವರು ಸಹೋದರರು. ಒಬ್ಬ ಸಹೋದರ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತಾರೆ. ಇನ್ನೊಬ್ಬ ಸಹೋದರ ಇಲ್ಲಿ ದೇವಾಲಯ ಮತ್ತು ಸಾಮಾಜಿಕ ಕಾರ್ಯಗಳನ್ನು ನೋಡಿಕೊಳ್ಳುತ್ತಾನೆ. ನನಗೆ ಒಬ್ಬ ಸಹೋದರಿ ಇದ್ದಾರೆ. ಅವರ ಪತಿ ಧಾರವಾಡದ ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಟ್ರಸ್ಟ್ ಹೆಸರಿನಲ್ಲಿವೆ’ ಎಂದರು.

ಜೈನರು ಅನೇಕ ದೇಗುಲಗಳ ಉಸ್ತುವಾರಿ:

ಜೈನ ಪರಿವಾರವಾಗಿದ್ದುಕೊಂಡು ಹಿಂದೂ ದೇವಾಲಯವನ್ನು ನಿರ್ವಹಿಸುತ್ತಿರುವ ಬಗ್ಗೆ ಉತ್ತರಿಸುತ್ತಾ, ‘ಈ ಆರೋಪದಲ್ಲಿ ಸತ್ಯವಿದೆ ಎಂದು ನಾನಗನ್ನಿಸುತ್ತಿಲ್ಲ. ಜೈನರು ನಡೆಸುತ್ತಿರುವ ಅನೇಕ ದೇವಾಲಯಗಳಿವೆ’ ಎಂದ ಹೆಗ್ಗಡೆಯವರು,

ಇದೇ ವೇಳೆ ವಿವಾದವು ರಾಜಕೀಯ ತಿರುವು ಪಡೆದಿದೆ ಎಂಬ ಆರೋಪಗಳನ್ನು ಅಲ್ಲಗಳೆದ ಅವರು, ‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಇಲ್ಲಿಗೆ ಬಂದಿದ್ದಾರೆ. ಕೆಲವರು ದೇವಸ್ಥಾನದ ಮಾನಹಾನಿಗೆ ಯತ್ನಿಸುತ್ತಿದ್ದಾರೆ. ಆದರೆ ಎಲ್ಲಾ ರಾಜಕೀಯ ಪಕ್ಷಗಳು ದೇವಳದ ಬೆಂಬಲಕ್ಕೆ ಬಂದಿವೆ’ ಎಂದರು.

ಡಿಕೆಶಿ ಹೇಳಿಕೆಗೆ ಸ್ವಾಗತ:ಧರ್ಮಸ್ಥಳದ ಅಪಪ್ರಚಾರಕ್ಕೆ ಯತ್ನ ನಡೆಯುತ್ತಿದೆ ಎಂದಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಯನ್ನು ಸ್ವಾಗತಿಸಿದರು. ಅಂತೆಯೇ, ‘ತಪ್ಪನ್ನು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅದು ಸಹಜ ಹೇಳಿಕೆ ಮತ್ತು ಅವರು ಹೇಳಿರುವುದು ಒಳ್ಳೆಯ ವಿಷಯ. ದೇವಸ್ಥಾನದ ಅಧಿಕಾರಿಗಳು ಅಥವಾ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗುತ್ತದೆ. ಇದು ಪಕ್ಷಪಾತವಿಲ್ಲದ ಹೇಳಿಕೆ’ ಎಂದು ಹೇಳಿದರು.ಇಷ್ಟೆಲ್ಲಾ ಆಗಿರುವುದರಿಂದ ಧರ್ಮಸ್ಥಳದ ಮೇಲಿರುವ ನಂಬಿಕೆಯ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದ ಹೆಗ್ಗಡೆಯವರು, ‘ನಾವು ಎಂದಿನಂತೆ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದೇವೆ. ಸ್ಥಳಕ್ಕೆ ಬರುತ್ತಿರುವ ಭಕ್ತರು ಅಥವಾ ಪದ್ಧತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಪಿತೂರಿ ಹಿಂದೆ ಯಾರಿದ್ದಾರೆ ಎಂದು ಗೊತ್ತು:ತನಿಖೆಯ ಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ‘ಗೃಹ ಸಚಿವರು ಹೇಳಿದಂತೆ, ಮಧ್ಯಂತರ ವರದಿ ನೀಡಲಾಗಿದೆ ಮತ್ತು ಶೀಘ್ರದಲ್ಲೇ ಅಂತಿಮ ವರದಿ ಹೊರಬರುತ್ತದೆ ಎಂದು ನಾನು ನಂಬುತ್ತೇನೆ. ಆರೋಪಗಳು ಸುಳ್ಳು ಎಂದು ಸಾಬೀತಾಗುತ್ತಿದ್ದಂತೆ ಅಪಪ್ರಚಾರದ ಅಭಿಯಾನ ಕೊನೆಗೊಳ್ಳುತ್ತದೆ. ದೇವಾಲಯವನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮುಂದೆ ಬಂದಿದ್ದಾರೆ. ಕೆಲ ಮೂಲಗಳಿಂದ ಈ ಪಿತೂರಿಗಳ ಹಿಂದೆ ಯಾರಿದ್ದಾರೆಂದು ನಮಗೆ ತಿಳಿದಿದೆ. ಆದರೆ ನಮ್ಮ ಬಳಿ ಪುರಾವೆಗಳಿಲ್ಲ. ಆದ್ದರಿಂದ ನಾವು ಯಾವುದೇ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ತನಿಖೆ ನಡೆಸುತ್ತಿರುವಾಗ ಅದನ್ನು ಸಾಬೀತುಪಡಿಸುವುದು ಎಸ್‌ಐಟಿಯ ಜವಾಬ್ದಾರಿಯಾಗಿದೆ’ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ