ಸಿರುಗುಪ್ಪ: ಪ್ರಗತಿನಿಧಿ ನೀಡುವುದು ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದೇಶ-ವಿದೇಶಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಸಿದ್ಧಿ ಹೊಂದಿದೆ ಎಂದು ಕಲ್ಯಾಣ ಕರ್ನಾಟಕ ವಿಭಾಗದ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಸುಧಾ ಗಾಂವಕರ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಅಭಿವೃದ್ಧಿ ಕಾರ್ಯಕ್ರಮದ ಜೊತೆಗೆ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದಡಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಾಂತ 1028 ಶಾಲೆಗಳಿಗೆ 10,234 ಜ್ಞಾನದೀಪ ಅತಿಥಿ ಶಿಕ್ಷಕರ ನಿಯೋಜನೆ ಮಾಡಿದೆ.
ನಮ್ಮ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಒಟ್ಟು 1,17,934 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದೆ. 60,531 ಶಾಲಾ ಮಕ್ಕಳಿಗೆ ₹32.44 ಕೋಟಿ ಮೌಲ್ಯದ ವಿದ್ಯಾರ್ಥಿ ವೇತನ ಒದಗಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಹಿಂದೂ ರುದ್ರಭೂಮಿ ಅಭಿವೃದ್ಧಿ, ಗ್ರಾಮ ಕಲ್ಯಾಣ ಯೋಜನೆ, ನವಚೇತನ ಕಾರ್ಯಕ್ರಮ, ಗೋ-ಶಾಲೆ ಅಭಿವೃದ್ಧಿ, ಜನಮಂಗಲ ಕಾರ್ಯಕ್ರಮ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಪ್ರಕೃತಿ ವಿಕೋಪಕ್ಕೆ ಪರಿಹಾರ, ವಿಶೇಷಚೇತನರಿಗೆ ಸಲಕರಣೆಗಳ ವಿತರಣೆ, ನಿರ್ಗತಿಕರಿಗೆ ಮಾಸಾಶನ ವಿತರಣೆ, ನಿರ್ಗತಿಕರಿಗೆ ವಾತ್ಸಲ್ಯ ಕಿಟ್‌ಗಳ ವಿತರಣೆ, ವಾತ್ಸಲ್ಯ ಮನೆ ರಚನೆ, ಶುದ್ಧಗಂಗಾ ಘಟಕಗಳು, ಕೆರೆಗಳ ಹೂಳೆತ್ತುವುದು, ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಯೋಜನೆಯು ಬಡವರ ಪಾಲಿನ ಆಶಾಕಿರಣವಾಗಿದೆ ಎಂದು ತಿಳಿಸಿದರು.ಯೋಜನಾಧಿಕಾರಿಗಳಾದ ಸುಧೀರ್ ಹಂಗಳೂರು, ಶಾಲಾ ಮುಖ್ಯಗುರಗಳಾದ ಶಿವಯೋಗಿ, ವಲಯ ಮೇಲ್ವಿಚಾರಕಿ ರೂಪಾ, ಜ್ಞಾನವಿಕಾ ಸಮನ್ವಯಾಧಿಕಾರಿ ಪ್ರಿಯಾ, ಸ್ಥಳೀಯ ಸೇವಾಪ್ರತಿನಿಧಿ ಅಂಬಿಕಾ, ಶಾಲಾ ಶಿಕ್ಷಕರು, ಸ್ವ-ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.