ಧಾರವಾಡದಲ್ಲಿ ಸಂಭ್ರಮದ ಕ್ರಿಸ್‌ಮಸ್‌ ಹಬ್ಬದಾಚರಣೆ

KannadaprabhaNewsNetwork | Published : Dec 26, 2023 1:32 AM

ಸಾರಾಂಶ

ಶತಮಾನದ ಇತಿಹಾಸ ಹೊಂದಿರುವ ಧಾರವಾಡದ ಹೆಬಿಕ್‌ ಮೆಮೋರಿಯಲ್‌ ಚರ್ಚ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಕ್ರೈಸ್ತ ಸಮುದಾಯವು ಸೇರಿ ಪ್ರಾರ್ಥನೆ ಸಲ್ಲಿಸಿ, ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನು ಇಟ್ಟಿದ್ದರು. ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಮೂಲಕ ಕ್ರೈಸ್ತರು ಹಬ್ಬವನ್ನು ಸಂಭ್ರಮಿಸಿದರು.

ವಿವಿಧ ಚರ್ಚ್‌ ಹಾಗೂ ಕ್ರೈಸ್ತರ ಮನೆಗಳಲ್ಲಿ ಹಬ್ಬದಾಚರಣೆಕನ್ನಡಪ್ರಭ ವಾರ್ತೆ ಧಾರವಾಡ

ಏಸುಕ್ರಿಸ್ತ ಹುಟ್ಟಿದ ದಿನ ಕ್ರಿಸ್‌ಮಸ್ ಹಬ್ಬವನ್ನು ನಗರದಲ್ಲಿ ಕ್ರೈಸ್ತ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.

ಶತಮಾನದ ಇತಿಹಾಸ ಹೊಂದಿರುವ ಇಲ್ಲಿಯ ಹೆಬಿಕ್‌ ಮೆಮೋರಿಯಲ್‌ ಚರ್ಚ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಕ್ರೈಸ್ತ ಸಮುದಾಯವು ಸೇರಿ ಪ್ರಾರ್ಥನೆ ಸಲ್ಲಿಸಿ, ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಧಾರವಾಡದ ಪ್ರಜೆಂಟೇಶನ್‌, ಸೇಂಟ್‌ ಜೋಸೆಫ್‌, ಸೇರಿದಂತೆ ಹಲವು ಚರ್ಚ್‌ಗಳಲ್ಲೂ ಕ್ರಿಸ್‌ಮಸ್‌ ಹಬ್ಬದ ಆಚರಣೆಗಳು ನಡೆದವು.

ಹಬ್ಬದ ಅಂಗವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನು ಇಟ್ಟಿದ್ದರು. ಕ್ರಿಸ್‌ಮಸ್‌ ಟ್ರೀ, ಸಾಂಟಾ ಕ್ಲಾಸ್‌ ಸಹ ಎಲ್ಲರಿಗೂ ಕೈ ಕುಲುಕಿ ಹಬ್ಬದ ಶುಭಾಶಯ ಹೇಳುತ್ತಿದ್ದನು. ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಮೂಲಕ ಕ್ರೈಸ್ತರು ಹಬ್ಬವನ್ನು ಸಂಭ್ರಮಿಸಿದರು.

ಪ್ರೀತಿ-ತ್ಯಾಗದ ಸಂದೇಶ ಸಾರುವ ಹಬ್ಬ

ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಹಾಗೂ ಬಿಶೋಪರಾದ ರೆ.ಮಾರ್ಟಿನ್‌ ಬೋರ್ಗಾಯಿ ತಮ್ಮ ಸಮುದಾಯಕ್ಕೆ ಕ್ರಿಸ್‌ಮಸ್‌ ಹಬ್ಬ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ ಏಸುವಿನ ಸಂದೇಶ ನೀಡಿದರು. ಕ್ರಿಸ್ತನು ಜಗತ್ತಿಗೆ ತೊರಿಸಿದ ಕರುಣೆ, ಶಾಂತಿ, ಪ್ರೀತಿ, ತ್ಯಾಗಗಳ ಸಂದೇಶವನ್ನು ಸಾರುವ ಹಬ್ಬವೇ ಕ್ರಿಸ್‌ಮಸ್. ಇದು ಕೇವಲ ಕ್ರೈಸ್ತ ಜನಾಂಗಕ್ಕೆ ಸೀಮಿತವಾದ ಹಬ್ಬವಲ್ಲ. ಸಮಸ್ತ ನಾಗರಿಕ ಜನಾಂಗಕ್ಕೆ ಸೇರಿದ ಹಬ್ಬ. ಜಾತಿ, ಭೇದ ಎಂದೆಣಿಸದೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಕ್ರೈಸ್ತ ಬಾಂಧವರ ಜೊತೆಯಲ್ಲಿ ಕ್ರೈಸ್ತರೇತರರು ಈ ಹಬ್ಬದಲ್ಲಿ ಸಕ್ರೀಯವಾಗಿ ಭಾಗವಹಿಸಲಿ ಎಂದರು.

ಕ್ರಿಸ್‌ಮಸ್ ಹಬ್ಬ

ಗಡಿಬಿಡಿಯಿಂದ ತುಂಬಿದ ಈ ಪ್ರಪಂಚದಲ್ಲಿ ಇಂದಿನ ಆಧುನಿಕ ಜಗತ್ತಿನಲ್ಲಿ ಉತ್ತಮ ಭಾಂಧವ್ಯ ಸಂಬಂಧಗಳನ್ನು ಕ್ರಿಸ್‌ಮಸ್‌ ಹಬ್ಬ ಸೃಷ್ಟಿಸಲಿ. ಪರಿಸ್ಪರ ಬಿನ್ನಾಭಿಪ್ರಾಯಗಳನ್ನು ತೆಗೆದುಹಾಕಿ, ಮತ ಪಂಥಗಳೆಂಬ ಬಿರುಕು ಗೋಡೆಯನ್ನು ತೆಗೆದುಹಾಕಿ ಉತ್ತಮ ಸಂಬಂಧವನ್ನು ಹೊಂದಲಿ. ಏಸುವ ಎಲ್ಲರಿಗೂ ಆರೋಗ್ಯ, ಸಮೃದ್ಧಿ, ಸಮಾಧಾನ ಹಾಗೂ ನೆಮ್ಮದಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ರೆ. ಮಾರ್ಟಿನ್‌ ಬೋರ್ಗಾಯಿ ಹೇಳಿದರು.

Share this article