ಜಿಲ್ಲಾಮಟ್ಟದಲ್ಲಿ ಕ್ರಮವಹಿಸಿ ಪರಿಹರಿಸಬಹುದಾದ ರೈತರ ಸಮಸ್ಯೆಗಳಿಗೆ ಅಧಿಕಾರಿಗಳ ಸಭೆ ಕರೆದು ಹಂತ-ಹಂತವಾಗಿ ಕ್ರಮಕೈಗೊಳ್ಳಲಾಗುವುದು. ಸರ್ಕಾರದ ಹಂತದಲ್ಲಿ ಆಗಬೇಕಾಗಿರುವ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಧಾರವಾಡ:
ರೈತರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರ, ರೈತರ ಸಭೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ವಿವಿಧ ರೈತ ಮುಖಂಡರು, ಕಡಲೆ ಖರೀದಿ, ಸಕ್ಕರೆ ಕಾರ್ಖಾನೆ ಆರಂಭ, ಗೋವಿನಜೋಳ, ಸೂರ್ಯಕಾಂತಿ, ಕುಸಬೆ ಖರೀದಿಗೆ ಪ್ರಸ್ತಾವನೆ ಸಲ್ಲಿಕೆ, ಸಕಾಲಕ್ಕೆ ವಿದ್ಯುತ್ ಪೂರೈಕೆ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಜಿಲ್ಲಾಧಿಕಾರಿಗೆ ವಿವರಿಸಿ ಪರಿಹಾರಕ್ಕೆ ಮನವಿ ಮಾಡಿದರು.
ರೈತರ ಮುಖಂಡರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಜಿಲ್ಲಾಮಟ್ಟದಲ್ಲಿ ಕ್ರಮವಹಿಸಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಅಧಿಕಾರಿಗಳ ಸಭೆ ಕರೆದು ಹಂತ-ಹಂತವಾಗಿ ಕ್ರಮಕೈಗೊಳ್ಳಲಾಗುವುದು. ಸರ್ಕಾರದ ಹಂತದಲ್ಲಿ ಆಗಬೇಕಾಗಿರುವ ಕ್ರಮಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರಸಗೊಬ್ಬರ, ಬೀಜ, ಬೆಳೆ ಪರಿಹಾರ ಹಾಗೂ ಕೃಷಿಗೆ ಸಂಬಂಧಿಸಿದ ಇತರ ಸರ್ಕಾರಿ ಸೌಲಭ್ಯ ನೀಡಲು ಸರ್ಕಾರ ರೈತರಿಗೆ ಫ್ರೂಟ್ಸ್ ಐಡಿ ಕಡ್ಡಾಯ ಮಾಡಿದ್ದು ಪ್ರತಿಯೊಬ್ಬರು ಮಾಡಿಸಿಕೊಳ್ಳಬೇಕೆಂದು ಹೇಳಿದ ಅವರು, ಈ ವರೆಗೆ ಜಿಲ್ಲೆಯಲ್ಲಿ ಈ ವರೆಗೆ 2,44,870 ರೈತರು ಪ್ರೂಟ್ಸ್ ಗುರಿತನ ಸಂಖ್ಯೆ ಹೊಂದಿದ್ದಾರೆ. ಉಳಿದವರು ತಕ್ಷಣ ಮಾಡಿಸಿಕೊಳ್ಳಬೇಕೆಂದರು.
ಬೆಳೆಹಾನಿ ಸಂಭವಿಸಿದ ವೇಳೆ ಪರಿಹಾರ ವಿತರಣೆ ವಿಳಂಬವಿಲ್ಲದೆ ನೀಡುವಂತೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿ, ರೈತರು ಅರ್ಜಿ ಸಲ್ಲಿಸಿದ ನಂತರ ತ್ವರಿತವಾಗಿ ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪರಿಹಾರ ನೀಡಬೇಕು ಎಂದರು.
ರಸಗೊಬ್ಬರ ಅಕ್ರಮ ತಡೆಗಟ್ಟಲು ಕೃಷಿ ಇಲಾಖೆ ಎಫ್‍ಐಡಿ ಕಡ್ಡಾಯಗೊಳಿಸಿದ್ದು, ಪ್ರತಿ ತಿಂಗಳು ಎಕರೆಗೆ ಒಂದು ಚೀಲ, ಕಬ್ಬು ಬೆಳೆಗಾರರಿಗೆ ಎರಡು ಚೀಲ ಗೊಬ್ಬರ ನೀಡಲಾಗುತ್ತಿದೆ. ರೈತರು ಗೊಬ್ಬರ ಮಿತವಾಗಿ ಬಳಸಬೇಕು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಎಸ್ಪಿ ಗುಂಜನ್ ಆರ್ಯ, ಎಡಿಸಿ ಗೀತಾ ಸಿ.ಡಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಎಸಿ ಶಾಲಂ ಹುಸೇನ,
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ವೀರಣ್ಣಗೌಡ ಪಾಟೀಲ, ಜಿಪಂ ಸಹಾಯಕ ಕಾರ್ಯದರ್ಶಿ ಅಜಯ ಎನ್. ಹಾಗೂ ರೈತ ಮುಖಂಡರಾದ ಚಂದ್ರಗೌಡ ಎಸ್. ಫಕೀರಗೌಡ, ಮುತ್ತು ಪಾಟೀಲ, ಗಂಗಾಧರ ಪಾಟೀಲ ಕುಲಕರ್ಣಿ, ಬಸವರಾಜ ಯೋಗಪ್ಪನವರ, ಹೇಮಣ್ಣಗೌಡ ಬಸನಗೌಡರ, ವೀರೇಶ ಸೊಬರದಮಠ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.