ಹುಬ್ಬಳ್ಳಿ: ಗಿರೀಶ ಮೆಟ್ಟೆಣ್ಣವರ್ ಹಾಗೂ ‘ಕುಡ್ಲಾ ರಾಂಪೇಜ್’ ಯೂಟ್ಯೂಬರ್ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈನ ಧರ್ಮೀಯರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಛಬ್ಬಿ ಗ್ರಾಮದ ಅಜೀತ್ ಬಸಾಪುರ ಪ್ರಕರಣ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಗಿರೀಶ ಮೆಟ್ಟೆಣ್ಣವರ್ ಅವರು, ‘ಕುಡ್ಲಾ ರಾಂಪೇಜ್’ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡುವಾಗ ಜೈನರು ಕ್ರೂರಿಗಳು, ದಬ್ಬಾಳಿಕೆ ಮಾಡುವವರು, ಮತಾಂಧರು ಎಂದು ಅಪಮಾನ ಮಾಡಿದ್ದಾರೆ. ಅಲ್ಲದೆ ಯೂಟ್ಯೂಬರ್ ಹಾಗೇ ಪ್ರಸಾರ ಮಾಡಿ ಸಮುದಾಯದ ಭಾವನಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಠಾಣೆಯ ಇನ್‌ಸ್ಪೆಕ್ಟರ್ ಜೀರೋ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಟಾರ್ಗೆಟ್ ಧರ್ಮಸ್ಥಳ ವಿರುದ್ಧ ಸಿಡಿದೆದ್ದ ಭಕ್ತರು
ಬೆಂಗಳೂರು : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿ ಧರ್ಮಸ್ಥಳ ಪರ ಭಕ್ತರು ಸೋಮವಾರ ರಾಜ್ಯದ ಹಲವೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಜೊತೆಗೆ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಕುರಿತು ಎಸ್‌ಐಟಿ ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಮಧ್ಯೆ, ಆ.24ರಂದು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ಸಮಾವೇಶ ನಡೆಸಲು ಚಿಂತನೆ ನಡೆದಿದೆ. ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಜೆ 4 ಗಂಟೆಗೆ ರಾಜ್ಯದ ಪ್ರಮುಖ ಹಿಂದೂ ನಾಯಕರು, ಧಾರ್ಮಿಕ ಮುಖಂಡರು ಸೇರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಸಮಾವೇಶ ನಡೆಸಲು ಯೋಜಿಸಲಾಗುತ್ತಿದೆ. ಆ ಮೂಲಕ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯ ವಿರುದ್ದ ಒಗ್ಗಟ್ಟು ಪ್ರದರ್ಶಿಸಲು ಚಿಂತನೆ ನಡೆದಿದೆ.
ಹಲವೆಡೆ ಪ್ರತಿಭಟನೆ:
ಮಂಡ್ಯದಲ್ಲಿ ಸಿಲ್ವರ್ ಜ್ಯೂಬಿಲಿ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಕ್ತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾಕಾರರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅನಾಮಿಕ ದೂರುದಾರನನ್ನು ಬಳಸಿಕೊಂಡು ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ ಬಿತ್ತರಿಸಲಾಗುತ್ತಿದೆ. ಇದು ಭಕ್ತರಿಗೆ ನೋವುಂಟು ಮಾಡುತ್ತಿದ್ದು, ಈ ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ ಎಂದು ಕಿಡಿ ಕಾರಿದರು. ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಸುಳ್ಳು ಆರೋಪ ಮಾಡಲು ಅವರಿಗೆ ಪ್ರಚೋದನೆ ನೀಡುತ್ತಿರುವವರು, ಈ ತಂಡಕ್ಕೆ ಬರುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.